

ಭುವನೇಶ್ವರ: ಮೂಢನಂಬಿಕೆಯಿಂದಾಗಿ ಕತ್ತೆ ಮದುವೆ, ಕಪ್ಪೆ ಮದುವೆಯನ್ನೆಲ್ಲ ಮಾಡುವುದನ್ನು ಕೇಳಿರುತ್ತೀರ. ಆದರೆ ನಾಯಿ ಮದುವೆ ಮಾಡುವುದನ್ನು ಕೇಳಿರುವುದು ಕಷ್ಟಸಾಧ್ಯ. ಅದರಲ್ಲೂ ಮನೆಯಂಗಳದಲ್ಲಿ ಆಡಿಕೊಂಡಿರುವ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡುವುದೆಂದರೆ?
ಆಶ್ಚರ್ಯ ಎನಿಸಿದರೂ ಇದು ಸತ್ಯವೇ. ಇಂತದ್ದೊಂದು ಮೂಢನಂಬಿಕೆ ಒಡಿಶಾದ ಮಯೂರ್ಭಂಜ್ನಲ್ಲಿ ಅನುಸರಿಸಲಾಗುತ್ತಿದೆ. ಅಲ್ಲಿನ ಗಂಭರಿಯಾ ಗ್ರಾಮದ ಬುಡಕಟ್ಟು ಸಮುದಾಯದಲ್ಲಿ ಇತ್ತೀಚೆಗೆ ಇಬ್ಬರು ಸಣ್ಣ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡಲಾಗಿದೆ. ಈ ಸುದ್ದಿ ಎಲ್ಲೆಡೆ ಹರಿದಾಡಿದೆ.
ಅಷ್ಟಕ್ಕೂ ಈ ರೀತಿ ನಾಯಿಯೊಂದಿಗೆ ಮದುವೆ ಮಾಡುವುದಕ್ಕೂ ಒಂದು ಕಾರಣವಿದೆಯಂತೆ. ಮದುವೆ ಮಾಡಲಾಗಿರುವ ಇಬ್ಬರೂ ಮಕ್ಕಳಿಗೆ ಬೇಗ ಹಲ್ಲು ಹುಟ್ಟಿದೆಯಂತೆ. ಅದು ಅವರ ಪ್ರಕಾರ ಒಳ್ಳೆಯದಲ್ಲವಂತೆ. ಹಾಗಾಗಿ ಮಕ್ಕಳ ಮೇಲಿನ ದುಷ್ಟ ಶಕ್ತಿಯ ಕಣ್ಣು ಹೋಗಲೆಂದು, ಅವರಿಗೆ ಅಂಟಿಕೊಂಡಿರುವ ದರಿದ್ರ ದೂರಾಗಲೆಂದು ಈ ರೀತಿ ನಾಯಿಯೊಂದಿಗೆ ಮದುವೆ ಮಾಡಿಸಲಾಗಿದೆಯಂತೆ.
ಈ ಕುರಿತಾಗಿ ಮಾತನಾಡಿರುವ ಮಯೂರ್ಭಂಜ್ ಪೊಲೀಸ್ ವರಿಷ್ಠಾಧಿಕಾರಿ ಸ್ಮಿತ್ ಪರ್ಮಾರ್, "ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಈ ರೀತಿಯ ಮೂಢನಂಬಿಕೆಗಳನ್ನು ತಡೆಯಲು ಜಿಲ್ಲಾಧಿಕಾರಿಗಳ ಜತೆ ಸೇರಿ ಕೆಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)