Ind vs Pak, CWC 2023: ಹೈ-ವೋಲ್ಟೇಜ್​ ಪಂದ್ಯ ವೀಕ್ಷಣೆ ವೇಳೆ ಹಲವರ ಐಫೋನ್‌ಗಳು ಕಳವು!

Untitled design - 2023-10-15T173327.444
Published on

ಅಹಮದಾಬಾದ್‌: ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್​ ಪಂದ್ಯ ಭಾರೀ ಸಂಖ್ಯೆಯ ಅಭಿಮಾನಿಗಳಿಂದ ಕೂಡಿತ್ತು.

ಪಾಕಿಸ್ತಾನ ನಡುವಿನ ಹೈ-ವೊಲ್ಟೇಜ್​ ಪಂದ್ಯ ವೀಕ್ಷಣೆಗೆ ಸಾಕ್ಷಿಯಾಗಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರತ ಪಂದ್ಯವನ್ನು ಗೆಲ್ಲುವ ಮೂಲಕ ಸಂತಸವನ್ನು ಚೆಲ್ಲಿತು. ಈ ವೇಳೆ ಖುಷಿಯೊಟ್ಟಿಗೆ ಮನೆಗೆ ತೆರಳಬೇಕಿದ್ದ ಕ್ರಿಕೆಟ್​ ಫ್ಯಾನ್ಸ್​ ದುಃಖದಿಂದ ಹೋಗಿರುವುದು ಇದೀಗ ಮುನ್ನೆಲೆಗೆ ಬಂದಿದೆ.

ಅಸಲಿಗೆ ಭಾರತ ಪಂದ್ಯವನ್ನು ವಶಪಡಿಸಿಕೊಂಡರು ಕ್ರಿಕೆಟ್​ ಅಭಿಮಾನಿಗಳು ಏಕೆ ಬೇಸರಗೊಂಡಿದ್ದಾರೆ ಎಂಬುದಕ್ಕೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನವಾದ ಐಫೋನ್​! ಪಂದ್ಯ ವೀಕ್ಷಿಸಲು ಭಾರೀ ಪ್ರಮಾಣದಲ್ಲಿ ಸ್ಟೇಡಿಯಂಗೆ ಆಗಮಿಸಿದ್ದ ಪ್ರೇಕ್ಷಕರು, ಮೋಜು ಮಾಡುವ ಭರದಲ್ಲಿ ತಮ್ಮ ಬಳಿಯಿರುವ ದುಬಾರಿ ಫೋನ್​ಗಳ ಬಗ್ಗೆ ಹೆಚ್ಚು ಗಮನಹರಿಸುವಲ್ಲಿ ವಿಫಲರಾಗಿದ್ದಾರೆ.

ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ತಮ್ಮ ಐಫೋನ್‌ಗಳನ್ನು ಕಳೆದುಕೊಂಡಿರುವ ಬಗ್ಗೆ ಜನರು ಸೋಷಿಯಲ್​ ಮೀಡಿಯಾದಲ್ಲಿ ದೂರು ನೀಡುವ ಮುಖೇನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ (ಟ್ವಿಟರ್​) ನೂರಾರು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ಊರ್ವಶಿ ರೌಟೇಲಾ ಕೂಡ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಅವರ 24 ಕ್ಯಾರೆಟ್​ ಗೋಲ್ಡ್​ ಐಫೋನ್​ ಮೊಬೈಲ್​ ಕೂಡ ಕಳ್ಳತನವಾದ ಬಗ್ಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡ ನಟಿ, "ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಓರಿಜಿನಲ್ ಚಿನ್ನದ ಐ ಫೋನ್ ಕಳೆದುಹೋಗಿದೆ! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ಆದಷ್ಟು ಬೇಗ ನನ್ನನ್ನು ಸಂಪರ್ಕಿಸಿ! ಸಹಾಯ ಮಾಡುವವರು ಟ್ಯಾಗ್ ಮಾಡಿ" ಎಂದು ಊರ್ವಶಿ ಟ್ವೀಟ್ ಮಾಡಿದ್ದಾರೆ.

ನಟಿ ಊರ್ವಶಿಯ ಬೆನ್ನಲ್ಲೇ ಹಲವರು ತಮ್ಮ ಐಫೋನ್ ಕಾಣೆಯಾದ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net