

| ವಿಲಾಸ ಮೇಲಗಿರಿ ಬೆಂಗಳೂರು
ವಿಧಾನಪರಿಷತ್ನ ಡಜನ್ಗೂ ಹೆಚ್ಚು ಸದಸ್ಯರು ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಸುತಾರಾಂ ಇಷ್ಟಪಡುತ್ತಿಲ್ಲ. ಬದಲಾಗಿ ಕೆಲವರು ಕ್ಷೇತ್ರಗಳನ್ನು ಹುಡುಕಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಂತಮ್ಮ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೆ ಕೆಲವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ.
ವಿಧಾನಸಭೆಯಿಂದ ಚುನಾಯಿತರಾದವರು, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ, ನಾಮನಿರ್ದೇಶನ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಪೈಕಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಬಹುತೇಕ ಸದಸ್ಯರಿಗೆ ಮೇಲ್ಮನೆ ಬೇಡವಾಗಿದೆ. ಒಂದು ಪಕ್ಷದ ಸದಸ್ಯರಿಗೆ ಮಾತ್ರ ಮೇಲ್ಮನೆ ವರ್ಜಿಸುತ್ತಿಲ್ಲ. ಆಡಳಿತ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷದ ಸದಸ್ಯರೂ ಇದರಲ್ಲಿದ್ದಾರೆ.
ಯಾರ ಕಣ್ಣು ಯಾವ ಕ್ಷೇತ್ರಕ್ಕೆ?: ಬಸವರಾಜ ಪಾಟೀಲ ಇಟಗಿ ರಾಯಚೂರು ಅಥವಾ ಯಾದಗಿರಿ ಜಿಲ್ಲೆಯಲ್ಲಿ ವಿಧಾನಸಭೆಗೆ ಟಿಕೆಟ್ ಕೇಳಿದ್ದಾರೆ. ಎರಡು ವರ್ಷಗಳ ಹಿಂದೆಯೇ ಮೇಲ್ಮನೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾವು ಮಾಡಿರುವ ಕೆಲಸ ಪರಿಗಣಿಸಿ ವಿಧಾನಸಭೆಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ. ಗೋಪಾಲಸ್ವಾಮಿ ಚನ್ನರಾಯಪಟ್ಟಣದ ಕಡೆಗೆ ಕಣ್ಣು ಹಾಯಿಸಿದ್ದಾರೆ. ಅಪ್ಪಾಜಿಗೌಡ ನಾಗಮಂಗಲದ ಕಡೆಗೆ ದೃಷ್ಟಿ ನೆಟ್ಟಿದ್ದಾರೆ. ಬಿ.ಎಂ.ಎಲ್. ಕಾಂತರಾಜ್ ತುರುವೇಕೆರೆಯಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ನಾರಾಯಣಸ್ವಾಮಿ ಕೆ.ಆರ್.ಪುರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಸಿ.ಆರ್.ಮನೋಹರ್ ಕೋಲಾರ ದಿಂದ ಸ್ಪರ್ಧಿಸಲು ಬಯಸಿದ್ದಾರೆ. ಎಸ್.ಎಲ್. ಭೋಜೇಗೌಡ ಕಡೂರು ಕ್ಷೇತ್ರದತ್ತ ಒಲವು ತೋರಿದ್ದಾರೆ. ವಿಜಯ್ ಸಿಂಗ್ ಬಸವಕಲ್ಯಾಣ ಟಿಕೆಟ್ಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.
ವಿಧಾನಸಭೆಯ ಆಸೆ ಯಾರ್ಯಾರಿಗೆ?: ಬಸವರಾಜ ಪಾಟೀಲ ಇಟಗಿ. ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ, ವಿಜಯ್ ಸಿಂಗ್, ನಾರಾಯಣಸ್ವಾಮಿ, ಸಿ.ಆರ್.ಮನೋಹರ್, ಗೋಪಾಲಸ್ವಾಮಿ, ಜಿ.ರಘು ಆಚಾರ್, ಎನ್. ಅಪ್ಪಾಜಿಗೌಡ, ಬಿಎಂಎಲ್ ಕಾಂತರಾಜ್, ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿರುವ ಎಸ್.ಎಲ್.ಭೋಜೇಗೌಡ, ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಟಿ.ಶ್ರೀಕಂಠೇಗೌಡ ಮುಂಬರುವ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕಾಂಗ್ರೆಸ್ನ ಶ್ರೀನಿವಾಸ ಮಾನೆ ಕೂಡ ಈ ಪಟ್ಟಿಯಲ್ಲಿದ್ದರೂ, ಪ್ರಸ್ತುತ ಹಾನಗಲ್ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಸ್ವಹಿತಾಸಕ್ತಿಗೆ ರಾಜಕೀಯ ಪ್ರವೇಶ: ಗಣಿ ಧಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಗ್ರಾನೈಟ್, ಎಜುಕೇಷನ್ ಲಾಬಿ ಮಾಡುವವರು, ಬಿಜಿನೆಸ್ನಲ್ಲಿ ಇರುವವರು ಹೆಚ್ಚು ಮಂದಿ ವಿಧಾನಸಭೆ/ ಪರಿಷತ್ ಪ್ರವೇಶಿಸುತ್ತಿದ್ದಾರೆ ಎಂಬ ಆರೋಪ ಕೂಡ ಚುನಾವಣೆಯಿಂದ ಚುನಾವಣೆಗೆ ಸತ್ಯವಾಗುತ್ತಿದೆ. ಹಣವುಳ್ಳವರು ವ್ಯವಹಾರ ರಕ್ಷಣೆಗೆ ಪರಿಷತ್ ಪ್ರವೇಶಿಸುತ್ತಿದ್ದಾರೆ. ಹಾಲಿ ಸದಸ್ಯರ ಪೈಕಿ ಅನೇಕರು ವೈಯಕ್ತಿಕ ಹಿತಾಸಕ್ತಿಗಾಗಿ ರಾಜಕೀಯ ರಂಗ ಪ್ರವೇಶಿಸಿರುವುದು ಸುಳ್ಳಲ್ಲ.
ವಿಧಾನಪರಿಷತ್ ಸದಸ್ಯರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶಗಳು ತೀರಾ ಕಡಿಮೆ. ಕ್ಷೇತ್ರ ವ್ಯಾಪ್ತಿ ಬಹಳಷ್ಟು ದೊಡ್ಡದಾಗಿರುವುದರಿಂದ ಜನರ ನಿರೀಕ್ಷೆಗೆ ಸ್ಪಂದಿಸುವುದು ಕಷ್ಟ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಏನಕ್ಕೂ ಸಾಲದು. ಮೇಲ್ಮನೆಯಲ್ಲಿ ನಾವು ಪ್ರಸ್ತಾಪಿಸಿದ ವಿಷಯಗಳ ಅನುಷ್ಠಾನ ಕೂಡ ಕಡಿಮೆ. ಶಾಸಕರಾದರೆ ಜನಸೇವೆ ಮಾಡಲು ವಿಫುಲ ಅವಕಾಶ ದೊರೆಯುತ್ತವೆ. ಹಾಗಾಗಿ ವಿಧಾನಸಭೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ.
| ಬಸವರಾಜ್ ಪಾಟೀಲ್ ಇಟಗಿ ಮೇಲ್ಮನೆ ಸದಸ್ಯ
ನನಗೆ ವಿಧಾನ ಪರಿಷತ್ ಚುನಾವಣೆ ಸಾಕೆನಿಸಿದೆ. ಇನ್ನೇನಿದ್ದರೂ ವಿಧಾನಸಭೆ, ರಾಜ್ಯಸಭೆ ಹಾಗೂ ಲೋಕಸಭೆಗಳತ್ತ ನನ್ನ ಗಮನ. ಬರುವ ಚುನಾವಣೆಯಲ್ಲಿ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಾಯಕರಲ್ಲಿ ಅವಕಾಶ ಕೋರಿದ್ದೇನೆ.
| ರಘು ಆಚಾರ್ ಪರಿಷತ್ ಸದಸ್ಯ
ವಿಧಾನಮಂಡಲದ ಸದಸ್ಯರಲ್ಲಿ ಎರಡನೇ ದರ್ಜೆ ಪ್ರಜೆಗಳಂತೆ ಕಾಣುವುದು, ವಿಧಾನಸಭೆ ಸದಸ್ಯರಿಗೆ ವಿಶೇಷ ಪ್ರಿವ್ಹಿಲೇಜ್ ಇರುವುದು, ಹಣ ಮಾಡಬೇಕೆನ್ನುವವರಿಗೆ ಶಾಸಕ ಸ್ಥಾನ ಹುಲ್ಲುಗಾವಲಿನಂತಿರುವುದು, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ, ಸ್ಥಳೀಯ ಸಂಸ್ಥೆ ಚುನಾವಣೆಗೆ 15-20 ಕೋಟಿ ರೂ. ಖರ್ಚು ಮಾಡಬೇಕಾಗಿರುವುದೂ ಪರಿಷತ್ ಚುನಾವಣೆಗೆ ಹಿಂದೇಟು ಹಾಕಲು ಪ್ರಮುಖ ಕಾರಣಗಳಾಗಿವೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸಾಮಾನ್ಯವಾಗಿ ಒಂದು ಜಿಲ್ಲೆಗೆ ಸೀಮಿತವಾಗಿರುತ್ತದೆ. ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರಗಳು 500-700 ಕಿ.ಮೀ. ವ್ಯಾಪ್ತಿ ಹೊಂದಿವೆ. 28ರಿಂದ 32 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುತ್ತವೆ. ಕ್ಷೇತ್ರ ವ್ಯಾಪ್ತಿ ದೊಡ್ಡದಾಗಿರುವುದರಿಂದ ಮತದಾರರನ್ನು ಹಿಡಿತಕ್ಕೆ ತೆಗೆದುಕೊಂಡು ಪುನರಾಯ್ಕೆಯಾಗುವುದು ಕಷ್ಟ. ಜತೆಗೆ ಓಡಾಟ ಇನ್ನೂ ಕಡುಕಷ್ಟ. ಮೇಲ್ಮನೆ ಸದಸ್ಯರಿಗೆ ಬಿಡುಗಡೆಯಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ 1-2 ಕೋಟಿ ರೂ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆ. ಯಾರಿಗೆ ಕೊಡುವುದು? ಯಾರಿಗೆ ಬಿಡುವುದು ಎಂಬುದು ದಿಕ್ಕುತೋಚದಂತಾಗುತ್ತದೆ. ಇದರಿಂದ ಅನೇಕರ ವಿರೋಧ ಕೂಡ ಕಟ್ಟಿಕೊಳ್ಳಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಮೇಲ್ಮನೆ ಸದಸ್ಯರ ಮನ ಕೆಳಮನೆ ಕಡೆಗೆ ತುಡಿಯುತ್ತಿದ್ದಾರೆ.