ಜನಮಾನಸದಲ್ಲಿ ಶಂಕರ್ ನಾಗ್ ಸದಾ ಜೀವಂತ; ಜನ್ಮದಿನದಂದು ಸ್ಮರಿಸಿಕೊಂಡ ಸ್ಯಾಂಡಲ್​ವುಡ್, ಅಭಿಮಾನಿ ವೃಂದ...

Feature
Published on

ಬೆಂಗಳೂರು: 'ಸತ್ತ ಮೇಲೆ ಮಲಗೋದು ಇದ್ದೇ ಇದೆ, ಬದುಕಿದ್ದಾಗ ಏನಾದರೂ ಸಾಧಿಸು..' ಎಂದು ಜನರಲ್ಲಿ ಒಂದು ಸಾಧನೆಯ ಜಾಗೃತಿ ಮೂಡಿಸಿದ್ದ ಪ್ರತಿಭಾವಂತ ಹಾಗೂ ಅತ್ಯಂತ ಕ್ರಿಯಾಶೀಲ ನಟ-ನಿರ್ದೇಶಕ ಶಂಕರ್​ನಾಗ್​. ಇಂದು ಅವರ ಜನ್ಮದಿನ, ಅವರು ಜನಿಸಿ ಇಂದಿಗೆ ಭರ್ತಿ 67 ವರ್ಷ.

ಒಂದೇ ಒಂದು ನಿಮಿಷವನ್ನೂ ಹಾಳು ಮಾಡದೆ ಪ್ರತಿಕ್ಷಣವನ್ನೂ ಸದ್ಬಳಕೆ ಮಾಡಿಕೊಂಡು ಬದುಕಿದ್ದ, ಒಂದಾನೊಂದು ಕಾಲದಲ್ಲಿ ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ಮಿಂಚಿನ ಓಟದಲ್ಲಿ ಕೆಲಸ ಮಾಡಿ ಅದೇ ವೇಗದಲ್ಲೇ ದೈಹಿಕವಾಗಿ ಮರೆಯಾದರೂ ಶಂಕರ್​ನಾಗ್ ಜನರ ಮನಸಲ್ಲಿ ಇನ್ನೂ ಬದುಕಿದ್ದಾರೆ. ಅಭಿಮಾನಿಗಳ ಅಧಿಕೃತ ಸಂಘವಿಲ್ಲದಿದ್ದರೂ ಶಂಕರ್​ನಾಗ್​ ಇಂದಿಗೂ ಜನರ ಮನಸಲ್ಲಿ ನೆಲೆಯೂರಿದ್ದಾರೆಂದರೆ ಬದುಕಿದ್ದಾಗ ಅವರು ಮಾಡಿರುವ ಸಾಧನೆ ಅಂಥದ್ದು.

ಬರೀ ಸಿನಿಮಾ ಮಾತ್ರವಲ್ಲದೆ ಜನೋಪಯೋಗಿ ಕೆಲಸಗಳಿಗೂ ಮುಂದಾಗಿದ್ದ ಅವರು ಇಂದು ಜನಪ್ರಿಯವಾಗಿರುವ ಮೆಟ್ರೋ ರೈಲು ಕನಸನ್ನು ಅಂದೇ ಕಂಡಿದ್ದರು. ಬಡವರಿಗೆ ಕಡಿಮೆ ಖರ್ಚಿನಲ್ಲಿ ಮನೆ ಒದಗಿಸು ಕಲ್ಪನೆಯನ್ನೂ ಅಂದೇ ಮೂರ್ತರೂಪಕ್ಕಿಳಿಸಿ ಅಂಥದ್ದೊಂದು ಮಾದರಿ ಮನೆಯನ್ನೂ ನಿರ್ಮಿಸಿದ್ದರು. ಇನ್ನೂ ಅನೇಕ ಕನಸುಗಳನ್ನು ಅವರು ಕಂಡಿದ್ದರೂ ದುರದೃಷ್ಟವಶಾತ್ ಅವು ನನಸಾಗಿಯೇ ಉಳಿದವು.

ಕನ್ನಡ ಚಿತ್ರರಂಗ ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದರೂ ಕರಾಟೆ ಕಿಂಗ್ ಶಂಕರ್​ನಾಗ್ ಅವರನ್ನು ನೆನಪಿಸಿಕೊಳ್ಳುವುದನ್ನು ಮರೆತಿಲ್ಲ. ಇಂದು ಕನ್ನಡ ಚಿತ್ರರಂಗದ ಹಲವರು, ಕನ್ನಡ ಸಿನಿಮಾಪ್ರಿಯರು ಶಂಕರ್​ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ರಾಜ್ಯದ ಅಲ್ಲಲ್ಲಿ ಆಟೋಚಾಲಕರು ಆಟೋ ಸ್ಟ್ಯಾಂಡ್​ಗಳಲ್ಲಿ ಶಂಕರ್​ ನಾಗ್​ ಫೋಟೋ ಇಟ್ಟು ಪೂಜೆ ಸಲ್ಲಿಸಿ, ಶಂಕರ್​ ನಾಗ್​ ಸಿನಿಮಾದ ಹಾಡುಗಳನ್ನು ಕೇಳಿಸಿ ಶಂಕರ್ ನಾಗ್ ಎಂಬ ಮಹಾಚೇತನಕ್ಕೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ನಟ-ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್​, ಕ ರಕ್ಷಿತ್ ಶೆಟ್ಟಿ, ನಟರಾದ ದರ್ಶನ್​ ತೂಗುದೀಪ್, ಪ್ರಜ್ವಲ್​ ದೇವರಾಜ್​, ನಿರ್ದೇಶಕ ಸಿಂಪಲ್ ಸುನಿ ಮುಂತಾದವರಲ್ಲದೆ ಸಚಿವರಾದ ನಾರಾಯಣ ಗೌಡ, ಪ್ರಭು ಚವಾಣ್ ಮುಂತಾದ ರಾಜಕಾರಣಿಗಳು ಕೂಡ ಶಂಕರ್​ ನಾಗ್ ಜನ್ಮದಿನದಂದು ಅವರನ್ನು ಸ್ಮರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net