

ಅವಕಾಶಗಳು ಸೂರ್ಯೋದಯದಂತೆ. ಬಹಳ ಹೊತ್ತು ಇರುವುದಿಲ್ಲ. ಕಾದರೆ ತಪ್ಪಿಸಿಕೊಳ್ಳಬೇಕಾಗುತ್ತದೆ. ಸುರಿದುಹೋದ ಮಳೆ, ಸರಿದುಹೋದ ಸಮಯ ಮತ್ತೆ ಸಿಗಲಾರದು. ಅರ್ಹತೆ ಇರುವಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂಬುದು ಸಹಜ ನಿರೀಕ್ಷೆ. ಆದರೆ, ಎಲ್ಲ ಸಮಯ ನಮ್ಮದಾಗಿರುವುದಿಲ್ಲ. ಕೆಲವೊಮ್ಮೆ ಸ್ವಾತಿ ಮಳೆಗೆ ಚಿಪು್ಪ ಬಾಯ್ದೆರೆದು ಕಾಯುವಂತೆ ಕಾಯಬೇಕಾಗುತ್ತದೆ.
ಒಂದಾನೊಂದು ಕಾಲದಲ್ಲಿ ಅಮೈನ್ ಎಂಬ ವ್ಯಕ್ತಿಯಿದ್ದ. ಬಡವರಿಗೆ ಸಹಾಯ ಮಾಡುತ್ತಿದ್ದ. ದಾನ- ಧರ್ಮ ಮಾಡುತ್ತಿದ್ದ. ಎಲ್ಲ ಪ್ರಾಣಿಗಳನ್ನು ಪ್ರೀತಿಸುತ್ತಿದ್ದ. ಜ್ಞಾನವನ್ನು ಅರಸುತ್ತ ಯಾತ್ರೆಗಳನ್ನು ಮಾಡುತ್ತಿದ್ದ. ಅನುಕರಣೀಯ ವ್ಯಕ್ತಿತ್ವ ಅವನದ್ದಾಗಿತ್ತು. ಇಷ್ಟೆಲ್ಲ ಒಳ್ಳೆಯ ಗುಣಗಳ ನಡುವೆಯೂ ಒಂದು ಅವಗುಣ ಅವನಲ್ಲಿತ್ತು. ಅದೆಂದರೆ, ಅಜಾಗರೂಕತೆಯಿಂದ ಇರುವುದು. ಅಮೈನ್ಗೆ ನಿದ್ರೆ ಮಾಡುವುದು ಬಲು ಪ್ರಿಯ ಕೆಲಸ. ಕೆಲವು ಸಲ ನಿದ್ದೆ ಮಾಡುವಾಗ ಜ್ಞಾನ ಗಳಿಸುವ, ಸದ್ಗುಣಗಳನ್ನು ಪ್ರದರ್ಶಿಸುವ ಅವಕಾಶಗಳು ತಪ್ಪಿಹೋಗುತ್ತಿದ್ದವು. ಈ ಅಜಾಗರೂಕತೆ ಅವನ ವ್ಯಕ್ತಿತ್ವದ ಮೇಲೆ ಬಲವಾದ ಅಚ್ಚನ್ನು ಒತ್ತಿತ್ತು.
ಕೊನೆಗೊಂದು ದಿನ ಅಮೈನ್ ಸಾವನ್ನಪ್ಪಿದ. ಪರಲೋಕಕ್ಕೆ ಪಯಣಿಸುತ್ತಿದ್ದಾಗ, ಸ್ವರ್ಗ ಪ್ರವೇಶಿಸುವ ಅವಕಾಶ ತನಗೆ ಲಭಿಸುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಂಡ. ಅವನು ಸ್ವರ್ಗದ ಬಾಗಿಲುಗಳನ್ನು ಸಮೀಪಿಸಿದಾಗ ಅವು ಮುಚ್ಚಿದ್ದವು. ಆಗ ಒಂದು ಧ್ವನಿ ಕೇಳಿಸಿತು. ‘ಜಾಗರೂಕನಾಗಿರು, ಸ್ವರ್ಗದ ಬಾಗಿಲುಗಳು ಒಂದು ನೂರು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತವೆ.’ ಅಮೈನ್ ಬಾಗಿಲುಗಳು ತೆರೆಯುವ ಕ್ಷಣಕ್ಕಾಗಿ ಕಾಯುತ್ತ ಅಲ್ಲಿಯೇ ಕುಳಿತ. ಸ್ವರ್ಗ ಪ್ರವೇಶಿಸುವ ಅವಕಾಶ ತನ್ನದಾಗುವ ಕ್ಷಣ ಸಮೀಪಿಸುತ್ತಿದೆ ಎಂಬ ಯೋಚನೆಯಿಂದ ಅವನು ಉತ್ತೇಜಿತನಾಗಿದ್ದ. ಬಹಳ ಹೊತ್ತು ಬಾಗಿಲುಗಳನ್ನು ನೋಡುತ್ತ ಕುಳಿತಿದ್ದ ಅವನು ಅರಿವಿಲ್ಲದೆಯೇ ತೂಕಡಿಸತೊಡಗಿದ. ಬಾಗಿಲು ತೆರೆಯುವಾಗ ಸದ್ದಾಗಿ ಎಚ್ಚರವಾಗುತ್ತದೆ ಎನ್ನುವುದು ಅವನ ವಿಚಾರವಾಗಿತ್ತು. ಆದರೆ, ಅವನು ಕಣ್ಣುರೆಪ್ಪೆ ಮುಚ್ಚಿದ ಕ್ಷಣದಲ್ಲಿಯೇ ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ಅರೆಬರೆ ಎಚ್ಚರವಾಗಿದ್ದ ಅವನು ಪೂರ್ಣವಾಗಿ ಕಣ್ತೆರೆದು ನೋಡುವಷ್ಟರಲ್ಲಿ ಆ ಬಾಗಿಲುಗಳು ಮುಚ್ಚಿಕೊಂಡವು.
ಅದೃಷ್ಟ ಎನ್ನುವುದು ಹುಟ್ಟಿನಿಂದ ಬರುವಂತಹುದಲ್ಲ. ಅದನ್ನು ಬೆಳೆಸಿಕೊಳ್ಳಬೇಕು. ನಾವು ಬಯಸಿದರೂ ಬಯಸದಿದ್ದರೂ ಜೀವನದ ಪಯಣ ಸಾಗುತ್ತಿರುತ್ತದೆ. ಆದರೆ, ಅದು ಯಶಸ್ಸಿನತ್ತ ಸಾಗಬೇಕಾದರೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೆಲಸ ದೊಡ್ಡದಿರಲಿ ಸಣ್ಣದಿರಲಿ, ಅದರಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ನಿಶ್ಚಿತ. ಕೈಗೆ ಸಿಗಲಾರದ ನಾಳೆಗಳ ಚಿಂತೆ ನಮಗೆ ಬೇಡ. ಕಣ್ಣೆದುರಲ್ಲಿರುವ ಈ ಕ್ಷಣಗಳಲ್ಲಿ ಬದುಕುವ ಸೊಗಸು ನಮ್ಮೊಳಗಿರಲಿ. ಒಂದಷ್ಟು ಆತ್ಮವಿಶ್ವಾಸ, ಧೈರ್ಯ, ಹುಮ್ಮಸ್ಸು, ಹೊರಗಿನ ಆಗುಹೋಗುಗಳತ್ತ ಗಮನ, ಎಚ್ಚರಿಕೆಯ ನಡೆ ಜತೆಗೆ ಜಾಗರೂಕತೆ ಇದ್ದರೆ ಎಲ್ಲರೂ ಬೆರಳಿಡುವಂತಹ ಸಾಧನೆ ಮಾಡಬಹುದು.
(ಲೇಖಕರು ಹವ್ಯಾಸಿ ಬರಹಗಾರರು)