VIDEO: ರೋಗ ನಿರೋಧಕ ಶಕ್ತಿಗೆ ಆಯುರ್ವೇದ, ಯೋಗ ಪರಿಣಾಮಕಾರಿ: 'ಮನ್​ ಕೀ ಬಾತ್​'ನಲ್ಲಿ ಪ್ರಧಾನಿ

PM modi
Published on

ನವದೆಹಲಿ: ಕರೊನಾ ವೈರಸ್​ ವಿರುದ್ಧ ಹೋರಾಡಲು ಅತ್ಯಂತ ಅವಶ್ಯಕವಾಗಿರುವುದು ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು. ಈ ಹಿನ್ನೆಲೆಯಲ್ಲಿ ನಮ್ಮ ಅತ್ಯಂತ ಪ್ರಾಚೀನ ಪರಂಪರೆಯಿಂದ ಬಂದಿರುವ ಆಯುರ್ವೇದಕ್ಕೆ ಮೊರೆ ಹೋಗುವುದು ಇಂದಿನ ಅವಶ್ಯಕತೆಯಾಗಿದೆ. ಆಯುರ್ವೇದದಿಂದ ನಾವು ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ನಡೆದ ಮನ್​ ಕೀ ಬಾತ್​ನ 65ನೇ ಸರಣಿಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ವಿಶ್ವದ ಬೇರೆ ಬೇರೆ ದೇಶಗಳ ಜನರು ಕೂಡ ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದು ನಮ್ಮ ಭಾರತದ ಹಿರಿಮೆ ಎಂದೇ ಹೇಳಬೇಕು. ಇದರ ಜತೆಗೆ ಯೋಗಾಭ್ಯಾಸ ಕೂಡ ಇಂದಿನ ಅನಿವಾರ್ಯತೆಯಾಗಿದೆ. ಯೋಗದಿಂದ ನಮ್ಮ ದೇಹವನ್ನು ಸಾಕಷ್ಟು ಚೈತನ್ಯಪೂರ್ಣವಾಗಿ ಇಟ್ಟುಕೊಳ್ಳಬಹುದು. ಹಾಲಿವುಡ್​ನಿಂದ ಹರಿದ್ವಾರದವರೆಗೆ ಅನೇಕ ಮಂದಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದರು.

ಮುಂದಿನ ತಿಂಗಳು 21ನೇ ಅಂತಾರಾಷ್ಟ್ರೀಯ ಯೋಗ ದಿನವಿರುವ ಹಿನ್ನೆಲೆಯಲ್ಲಿ, ಯೋಗಾಧ್ಯಾಯನದಲ್ಲಿ ತೊಡಗಿಕೊಂಡಿರುವವರಿಗೆ ಪ್ರಧಾನಿ ಮೋದಿ ಅವರು ಚಿಕ್ಕದೊಂದು ಸ್ಪರ್ಧೆ ಏರ್ಪಡಿಸಿದ್ದಾರೆ. ಅದೇನೆಂದರೆ my life my yog ಬ್ಲಾಗ್​ ತೆರೆಯಲಾಗಿದ್ದು, ಅದರಲ್ಲಿ  ಮೂರು ನಿಮಿಷಗಳ ಯೋಗಾಸನದ ವಿಡಿಯೋ ಮಾಡಿ ಅದನ್ನು ಅಪ್​ಲೋಡ್​ ಮಾಡಬೇಕು. ಜತೆಗೆ ಈ ಯೋಗದಿಂದ ನಿಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿಸಬೇಕು ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ.

ಭಾರತದಲ್ಲಿ ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈರಸ್​ ನಿಯಂತ್ರಣದಲ್ಲಿ ಇದೆ. ಇದಕ್ಕೆ ಪ್ರತಿಯೊಬ್ಬ ಪ್ರಜೆಗಳ ಕೊಡುಗೆಯೂ ಇದೆ ಎಂದು ಅವರು ಹೇಳಿದರು.

ಲಾಕ್​ಡೌನ್​ ಸಮಯದಲ್ಲಿ ದೇಶದ ವಿವಿಧ ಭಾಗಗಳ ಜನರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ, ಕೆಲವರು ಒಳ್ಳೊಳ್ಳೆ ಸಂಶೋಧನೆಗಳನ್ನೂ ಮಾಡುವ ಮೂಲಕ ವೈರಸ್​ ವಿರುದ್ಧದ ಹೋರಾಟದಲ್ಲಿ ನೆರವು ನೀಡಿದ್ದಾರೆ ಎಂದಿರುವ ಪ್ರಧಾನಿ, ಈ ಸಂದರ್ಭದಲ್ಲಿ ಹಲವು ರಾಜ್ಯಗಳ ಕೆಲವರ ಉದಾಹರಣೆಗಳನ್ನು ನೀಡಿದರು. ಜತೆಗೆ, ಅನೇಕ ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಅನೇಕ ಮಹಿಳೆಯರು ಮಾಸ್ಕ್​ ತಯಾರಿಸಿ ಅದನ್ನು ಕಡಿಮೆ ಬೆಲೆಗೆ ನೀಡಿದ್ದಾರೆ. ಮಹಿಳೆಯರು ಈ ರೀತಿಯ ಪ್ರಶಂಸಾರ್ಹ ಕಾರ್ಯ ಮಾಡುವ ಮೂಲಕ ವೈರಸ್​ ತೊಲಗಿಸಲು ತಮ್ಮದೇ ಆದ ಕೊಡುಗೆ ನೀಡಿರುವುದು ನಿಜಕ್ಕೂ ಅಭಿನಾಂದರ್ಹವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಳೆದ ಬಾರಿ ಮನ್​ ಕೀ ಬಾತ್​ ಮಾತನಾಡುವ ಸಮಯದಲ್ಲಿ ದೇಶದಲ್ಲಿ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ, ಈ ಬಾರಿ ಲಾಕ್’ಡೌನ್ ಸಡಿಲಗೊಂಡಿದೆ. ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಜನರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಹೆಜ್ಜೆ ಇಡುವ ಅಗತ್ಯವಿದೆ. ಶ್ರಮಿಕ ವಿಶೇಷ ರೈಲು ಸೇರಿದಂತೆ ಇತರ ರೈಲು ಹಾಗೂ ವಿಮಾನ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಜನರು ಗೊಂದಲಕ್ಕೆ ಒಳಗಾಗದೇ ಎಚ್ಚರಿಕೆಯಿಂದಿರಬೇಕಿದೆ. ಇದರ ಜತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಸಾಮಾಜಿಕ ಅಂತರಗಳು ಹೆಚ್ಚಾಗಬೇಕಿದೆ. ಸಾಧ್ಯವಾದಷ್ಟು ಮಾಸ್ಕ್ ಗಳನ್ನು ಧರಿಸುವುದು, ಮನೆಗಳಲ್ಲಿಯೇ ಹೆಚ್ಚು ಕಾಲ ಕಳೆಯುವುದಕ್ಕೆ ಪ್ರಯತ್ನಿಸಿ ಎಂದರು.

ಆತ್ಮ ನಿರ್ಭರ್​ ಭಾರತ ಯೋಜನೆಯಡಿಯಲ್ಲಿ ಭಾರತವನ್ನು ಆರ್ಥಿಕವಾಗಿ ಸಬಲಗೊಳಿಸುವ ಸರ್ಕಾರದ ಯೋಜನೆ ಫಲ ನೀಡಲಿದೆ. ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಜನತೆ ಸಹಕರಿಸಬೇಕು. ಹೆಚ್ಚು ಹೆಚ್ಚು ದೇಶೀಯ ಉತ್ಪನ್ನಗಳನ್ನು ಬಳಕೆ ಮಾಡಿದರೆ ಖಂಡಿತವಾಗಿಯೂ ಈ ಯೋಜನೆ ಸಫಲವಾಗುತ್ತದೆ ಎಂದು ಪ್ರಧಾನಿ ಕರೆ ನೀಡಿದರು.

ಆಯುಷ್ಮಾನ್​ ಯೋಜನೆ ಮೂಲಕ ಒಂದು ಕೋಟಿಗಳು ಅಧಿಕ ರೋಗಿಗಳಿಗೆ ಸಹಾಯ ಮಾಡಿದ್ದೇವೆ. ಫಲಾನುಭವಿಗಳ ಸಂಖ್ಯೆ ಕೋಟಿಯನ್ನು ದಾಟಿರುವುದು ತುಂಬಾ ಖುಷಿಯ ಸಮಾಚಾರ. ಅನೇಕ ಫಲಾನುಭವಿಗಳ ಜತೆ ನಾನು ಮಾತುಕತೆ ನಡೆಸಿದ್ದು, ಅವರೆಲ್ಲರೂ ತಮಗಾಗಿರುವ ಸಹಾಯದ ಬಗ್ಗೆ ತಿಳಿಸಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತಾರ ಮಾಡುವ ಮೂಲಕ ಪ್ರತಿಯೊಬ್ಬ ಅರ್ಹರಿಗೂ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net