

ನವದೆಹಲಿ: ಸುಮಾರು 70 ವರ್ಷಗಳ ಇತಿಹಾವುಳ್ಳ ಸುಪ್ರೀಂಕೋರ್ಟ್ ಇದಾಗಲೇ ನೂರಾರು ಮುಖ್ಯನ್ಯಾಯಮೂರ್ತಿಗಳನ್ನು ಕಂಡಿದೆ. ಆದರೆ ಇದುವರೆಗೂ ಒಬ್ಬರೇ ಒಬ್ಬರು ಮಹಿಳಾ ಮುಖ್ಯನ್ಯಾಯಮೂರ್ತಿಗಳನ್ನು ಇದು ಕಂಡಿಲ್ಲ.
ಆದರೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕ ಇತಿಹಾಸ ಬರೆಯುವ ದಿನ ದೂರವಿಲ್ಲ.
ಹೌದು. ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಯಾಗಿರುವ ಬಿ.ವಿ.ನಾಗರತ್ನಾ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಕುರಿತು ಸುಪ್ರೀಂಕೋರ್ಟ್ನ ಉನ್ನತ ಮಟ್ಟದ ನೇಮಕಾತಿ ಸಮಿತಿ (ಕೊಲೀಜಿಂ) ಶಿಫಾರಸು ಮಾಡಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ನ್ಯಾ.ನಾಗರತ್ನಾ ಅವರು ಈ ಹುದ್ದೆ ಏರಲಿರುವ ಪ್ರಥಮ ಮಹಿಳೆ ಆಗಲಿದ್ದಾರೆ.
ಆದರೆ ಇದು ಅಂದುಕೊಂಡಷ್ಟು ಸುಲಭ ಎಂದೂ ತೋರುತ್ತಿಲ್ಲ. ಏಕೆಂದರೆ ಹಾಲಿ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರ ನೇತೃತ್ವದಲ್ಲಿ ನಡೆದಿರುವ ಪ್ರಾಥಮಿಕ ಹಂತದ ಮಾತುಕತೆಯಲ್ಲಿ ಇವರ ಹೆಸರು ಕೇಳಿಬಂದಿದ್ದರೂ, ಇವರ ನೇಮಕಕ್ಕೆ ಸ್ವಲ್ಪ ವಿರೋಧವೂ ಕೇಳಿಬಂದಿದೆ ಎನ್ನಲಾಗಿದೆ.
ಕರ್ನಾಟಕದಿಂದ ಈಗಾಗಲೇ ಹಲವಾರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ಗೆ ನೇಮಕಗೊಂಡಿದ್ದಾರೆ. ಅವರಲ್ಲಿ ಕೆಲವರು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೂ ಏರಿದ್ದಾರೆ. ಆದ್ದರಿಂದ ಇತರ ಹೈಕೋರ್ಟ್ನ ನ್ಯಾಯಮೂರ್ತಿಗಳಿಗೂ ಅವಕಾಶ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದವರಾಗಿರುವ ನ್ಯಾ.ನಾಗರತ್ನಾ ಅವರ ಹೆಸರಿಗೆ ಅಪಸ್ವರ ಕೇಳಿಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅರ್ಹತೆಯ ಆಧಾರದ ಮೇಲೆ ಪರಿಗಣಿಸುವುದಾದರೆ ಇವರು ಖಂಡಿತವಾಗಿಯೂ ಈ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ನ್ಯಾಯಮೂರ್ತಿ ನಾಗರತ್ನಾ ಅವರು 1989ರಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆಗಿದ್ದ ಇ.ಎಸ್.ವೆಂಕಟರಾಮಯ್ಯ ಅವರ ಪುತ್ರಿ.
ಸುಪ್ರೀಂಕೋರ್ಟ್ನ ಪ್ರಸ್ತುತ ಎರಡು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ನ್ಯಾ.ಆರ್.ಭಾನುಮತಿ (ಜುಲೈ 19) ಹಾಗೂ ನ್ಯಾ. ಅರುಣ್ ಮಿಶ್ರಾ (ಸೆ.2) ಅವರು ನಿವೃತ್ತರಾಗಲಿದ್ದು, ಇನ್ನೂ ಎರಡು ಹುದ್ದೆಗಳ ಖಾಲಿ ಉಳಿಯಲಿವೆ. ಈ ಹಿನ್ನೆಲೆಯಲ್ಲಿ ನ್ಯಾ.ನಾಗರತ್ನಾ ಅವರ ನೇಮಕಾತಿ ಈಗ ಅಲ್ಲದಿದ್ದರೂ ಮುಂದೆ ಖಂಡಿತ ಸಾಧ್ಯವಿದೆ ಎಂದು ಕಾನೂನು ವಲಯಗಳಲ್ಲಿ ಚರ್ಚೆಯಾಗುತ್ತಿದೆ.
1962ರಲ್ಲಿ ಜನಿಸಿರುವ ನ್ಯಾ.ನಾಗರತ್ನಾ ಅವರಿಗೆ ಈಗ 58 ವರ್ಷಗಳು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಇರುವ ಹಿನ್ನೆಲೆಯಲ್ಲಿ ನಾಗರತ್ನಾ ಅವರಿಗೆ ಈ ಹುದ್ದೆ ಏರಲು ಸಾಕಷ್ಟು ಅವಕಾಶಗಳು ಇವೆ ಎಂಬ ಮಾತುಗಳೂ ಕೇಳಿಬರುತ್ತಿವೆ.