

ಶ್ರೀನಗರ: ಕಳೆದ ವರ್ಷ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದಂತೆಯೇ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಉಗ್ರನನ್ನು ಜಮ್ಮು–ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ದಾಳಿಗೆ ವಿಫಲ ಯತ್ನ ನಡೆಸಿದ್ದ ಈ ಉಗ್ರನನ್ನು ಶೋಪಿಯಾನಾ ಜಿಲ್ಲೆಯ ಹಿದಾಯತ್ ಉಲ್ಲಾಹ್ ಮಲಿಕ್ ಎಂದು ಗುರುತಿಸಲಾಗಿದ್ದು, ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ ಎಂದು ತಿಳಿದುಬಂದಿದೆ.
ಸಿಆರ್‌ಪಿಎಫ್ ವಾಹನಕ್ಕೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿ 40 ಯೋಧರನ್ನು ಬಲಿಪಡೆದಿದ್ದ ರೀತಿಯಲ್ಲಿಯೇ ಮತ್ತೊಂದು ದಾಳಿಯನ್ನು ನಡೆಸಲು ಈತ ಪ್ರಯತ್ನಿಸಿದ್ದ. ಆದರೆ ಭಾರತೀಯ ಸೇನಾಪಡೆ ಅದನ್ನು ವಿಫಲಗೊಳಿಸಿದ್ದರು. ಈ ದಾಳಿ ಸಂಚಿಗೆ ಸಂಬಂಧಿಸಿದಂತೆ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಈತನೇ ಎಂಬುದು ಈಗ ಬೆಳಕಿಗೆ ಬಂದಿದೆ.
ಸ್ಫೋಟಕ ತುಂಬಿದ್ದ ಸ್ಯಾಂಟ್ರೋ ಕಾರ್ನಲ್ಲಿ ದಾಳಿ ನಡೆಯುವ ಬಗ್ಗೆ ಪೊಲೀಸರು ಕಾರನ್ನು ನಿಲ್ಲಿಸುತ್ತಿದ್ದಂತೆಯೇ ಈತ ಅಲ್ಲಿಂದ ಪರಾರಿಯಾಗಿದ್ದ. ನಂತರ ಕಾರಿನಲ್ಲಿದ್ದ ಐಇಡಿಯನ್ನು ಪೊಲೀಸರು ಸ್ಫೋಟಗೊಳಿಸಿ, ದೊಡ್ಡ ಮಟ್ಟದ ದಾಳಿಯೊಂದು ವಿಫಲಗೊಳ್ಳುವಂತೆ ಮಾಡಿದ್ದರು.
ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಕಾರು ಬಾಂಬ್ ಮೂಲಕ ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಹಿಜ್ಬುಲ್ ಮುಜಾಹೀದ್ದೀನ್ (ಎಚ್‌ಎಂ) ಮತ್ತು ಜೈಷ್–ಇ–ಮೊಹಮ್ಮದ್ (ಜೆಇಎಂ) ಉಗ್ರಗಾಮಿ ಸಂಘಟನೆಗಳು ಈ ಸಂಚು ರೂಪಿಸಿದ್ದವು ಎಂಬುದು ತಿಳಿದುಬಂದಿದೆ.
ಪುಲ್ವಾಮಾದಲ್ಲಿ ಕಳೆದ ವರ್ಷ ಫೆಬ್ರುವರಿ 14ರಂದು ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. (ಏಜೆನ್ಸೀಸ್)