

ನವದೆಹಲಿ: ಇದೀಗ ಎಲ್ಲೆಲ್ಲೂ ಸ್ವದೇಶಿ ಅಭಿಯಾನ ಶುರುವಾಗಿದೆ. ಚೀನಾ ಮೂಲದ ಟಿಕ್ಟಾಕ್ನಿಂದ ಆಗುತ್ತಿರುವ ಅನಾಹುತ ಹಾಗೂ ಈ ಆ್ಯಪ್ ಯುವಕರರನ್ನು ತಪ್ಪುದಾರಿಗೆ ಎಳೆಯುತ್ತಿರುವುದನ್ನು ಗಮನಿಸಿ ಅದನ್ನು ಬ್ಯಾನ್ ಮಾಡುವ ಅಭಿಯಾನವೂ ಶುರುವಾಗಿದೆ.
ಇದೇ ಕಾರಣಕ್ಕೆ ಭಾರತದಲ್ಲಿ ಅನೇಕ ಮಂದಿ ಆ್ಯಪ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಮೂಲಕ ಚೀನಾ ಮೂಲದ ಆ್ಯಪ್ ಅನ್ನು ಧಿಕ್ಕರಿಸುತ್ತಿದ್ದಾರೆ. ತನ್ನ ದೇಶದಲ್ಲಿ ಟಿಕ್ಟಾಕ್ ಬಳಸದೇ ಭಾರತ ಸೇರಿದಂತೆ ಅನೇಕ ದೇಶಗಳ ಜನರನ್ನು ಹಾಳು ಮಾಡುತ್ತಿರುವ ಚೀನಾದ ದುರ್ಬುದ್ಧಿಗೆ ಭಾರತದಲ್ಲಿ ಇದೀಗ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಸ್ವದೇಶಿ ಆ್ಯಪ್ ಆಗಿರುವ "ಮಿತ್ರೋ" ಇದೀಗ ಭಾರತದಲ್ಲಿ ಹವಾ ಸೃಷ್ಟಿಸಿದೆ. ಇದಾಗಲೇ 50 ಲಕ್ಷಕ್ಕೂ ಅಧಿಕ ಬಳಕೆದಾರರು ಇದನ್ನು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.
ಆದರೆ ಅಮೆರಿಕ ಮೂಲಕ ಗೂಗಲ್ ಸಂಸ್ಥೆ ಭಾರತದ ಟ್ರೆಂಡ್ಗೆ ಬೆದರಿ ಬಿಟ್ಟಿದೆ! ಭಾರತ ಒಂದರಿಂದಲೇ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಟಿಕ್ಟಾಕ್ ಜಾಹೀರಾತಿನ ಮೂಲಕ ಪಡೆಯುತ್ತಿರುವ ಚೀನಾಕ್ಕೆ ಧಕ್ಕೆ ಉಂಟಾಗುವ ಭಯದಿಂದ ಗೂಗಲ್ ಸಂಸ್ಥೆ ಕಿತಾಪತಿ ಮಾಡುತ್ತಿದೆ.
ಅದೇನೆಂದರೆ ಟಿಕ್ಟಾಕ್ ವಿರುದ್ಧ ಅಭಿಯಾನ ಶುರುವಾಗಿರುವ ಬೆನ್ನಲ್ಲೇ ಅದರ ವಿರುದ್ಧ ಲಕ್ಷಾಂತರ ಕಮೆಂಟ್ಗಳನ್ನು ಜನರು ಮಾಡಿದ್ದಾರೆ. ಮದ್ರಾಸ್ ಹೈಕೋರ್ಟ್ ಕೂಡ ಈ ಹಿಂದೆ ಈ ಆ್ಯಪ್ ಬ್ಯಾನ್ಗೆ ಆದೇಶ ಹೊರಡಿಸಿದ್ದನ್ನು ಕೂಡ ಉಲ್ಲೇಖಿಸಿರುವ ಅನೇಕ ಬಳಕೆದಾರರು, ಟಿಕ್ಟಾಕ್ನಿಂದ ಜನರು ಹೇಗೆ ಹಾದಿ ತಪ್ಪುತ್ತಿದ್ದಾರೆ ಎಂಬ ಬಗ್ಗೆ ಕಮೆಂಟ್ಗಳನ್ನು ಮಾಡಿದ್ದಾರೆ.
ಆದರೆ ಈ ಯಾವುದೇ ಕಮೆಂಟ್ಗಳು ಹೊಸದಾಗಿ ಟಿಕ್ಟಾಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವವರಿಗೆ ಕಾಣಿಸಬಾರದು ಎನ್ನುವ ಕಾರಣದಿಂದ ಎಲ್ಲಾ ನಕಾರಾತ್ಮಕ ಕಮೆಂಟ್ಗಳನ್ನು ಗೂಗಲ್ ತೆಗೆದುಬಿಟ್ಟಿದೆ. ಅದೂ ಎಷ್ಟು ಅಂತೀರಾ. ಒಂದಲ್ಲಾ... ಎರಡಲ್ಲಾ... ಬರೋಬ್ಬರಿ 80 ಲಕ್ಷಕ್ಕೂ ಅಧಿಕ ನೆಗೆಟಿವ್ ರಿವ್ಯೂಗಳನ್ನು ಗೂಗಲ್ ಅಳಿಸಿ ಹಾಕಿದೆ. 2.0ಕ್ಕೆ ಇಳಿದಿದ್ದ ಟಿಕ್ಟಾಕ್ ರೇಟಿಂಗ್ ಅನ್ನು ಪುನಃ 4.4ಕ್ಕೆ ಏರಿಸಲು ಗೂಗಲ್ ಯಶಸ್ವಿ ಕೂಡ ಆಗಿಬಿಟ್ಟಿದೆ!
ಹೊಸದಾಗಿ ಟಿಕ್ಟಾಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಬಯಸುವವರಿಗೆ ಅದರಿಂದ ಆಗುತ್ತಿರುವ ಯಾವುದೇ ಅನಾಹುತಗಳ ಬಗ್ಗೆ ಈಗ ಕಮೆಂಟ್ಗಳೇ ಇಲ್ಲ. ಏನಿದ್ದರೂ ಅದರ ಪರವಾಗಿ ಇರುವ ಕಮೆಂಟ್ಗಳು ಮಾತ್ರ ಕಾಣಿಸುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಜನರು ಇದನ್ನು ಪುನಃ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗೂಗಲ್ಗೂ ಆದಾಯ ಬರುತ್ತಿದೆ. (ಏಜೆನ್ಸೀಸ್)