ಮಣಿಪುರ ಜನಾಂಗೀಯ ಹಿಂಸೆಗೆ ಕಾರಣವಾಗಿದ್ದ ವಿವಾದಿತ ಆದೇಶ ರದ್ದುಗೊಳಿಸಿದ ಹೈಕೋರ್ಟ್​

high court
Published on

ಇಂಫಾಲ್: ಮಣಿಪುರದಲ್ಲಿ ಭೀಕರ ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿ 200ಕ್ಕೂ ಹೆಚ್ಚು ಜನರ ಹತ್ಯೆಗೆ ಮುನ್ನುಡಿ ಬರೆದ ವಿವಾದಿತ ಆದೇಶವನ್ನು ಮಣಿಪುರ ಹೈಕೋರ್ಟ್ ಈಗ ರದ್ದುಗೊಳಿಸಿದೆ. ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವಂತೆ ತಾನೇ ನೀಡಿದ್ದ ಆದೇಶವನ್ನು ಹಿಂಪಡೆದುಕೊಂಡಿದೆ.

2023ರ ಮಾ.27ರಂದು ಅಂದಿನ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾ. ಎಂ.ವಿ. ಮುರಳೀಧರನ್ ಆದೇಶ ಹೊರಡಿಸಿ, 'ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮಣಿಪುರ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಇದನ್ನು ವಿರೋಧಿಸಿದ್ದ ಕುಕಿ ಸಮುದಾಯದವರು, ದಂಗೆ ಎದ್ದಿದ್ದರು. ಆ ಬಳಿಕ ತಿಂಗಳಾನುಗಟ್ಟಲೆ ನಡೆದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಈ ನಡುವೆ, ಈ ಆದೇಶ ರದ್ದತಿ ಕೋರಿ ಮಣಿಪುರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ. ಗೋಲಿ ಗೈಫುಲ್‌ಶಿಲ್ಲು ಅವರು, 'ಎಸ್ಸಿ -ಎಸ್ಟಿ ಪಟ್ಟಿಗೆ ಜಾತಿಗಳನ್ನು ಸೇರಿಸುವಂತೆ ಸೂಚನೆ ನೀಡುವ ಅಧಿಕಾರ ಕೋರ್ಟ್‌ಗಳಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈತೇಯಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಆದೇಶವನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ ಜನಾಂಗೀಯ ಸಂಘರ್ಷಕ್ಕೆ ಫುಲ್​ಸ್ಟಾಪ್​ ಹಾಕಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net