

ಮಂಡ್ಯ: ಜಿಲ್ಲೆಯ 6 ಮಂದಿ ಶಾಸಕರು ಮೊದಲು ಮೇಲುಕೋಟೆಗೆ ಬಂದು ಆಣೆ - ಪ್ರಮಾಣ ಮಾಡಲಿ. ನಂತರ ನಾನು ಪ್ರಮಾಣ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
6 ಮಂದಿ ಜೆಡಿಎಸ್ ಶಾಸಕರು ಯಾವಾಗ ಸಮಯವಾಗುತ್ತದೆ ಹೇಳಲಿ. ಅಂದು ಎಲ್ಲರೂ ಬಂದು ಆಣೆ ಪ್ರಮಾಣ ಮಾಡಬೇಕು. ದಿನಾಂಕ ಹಾಗೂ ಸಮಯ ಅವರೇ ನಿರ್ಧಾರ ಮಾಡಲಿ ಎಂದು ಸಂಸದೆ ಸುಮಲತಾ ಸವಾಲೆಸೆದಿದ್ದಾರೆ.
ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಜೆಡಿಎಸ್ ಶಾಸಕರ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ನನ್ನ ಬಳಿಯೂ ದಾಖಲೆ ಇದ್ದು, ಬಿಡುಗಡೆ ಮಾಡುತ್ತೇನೆಂದಿದ್ದರು. ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲೆಗೆ ಸಂಸದೆ ಕೊಡುಗೆ ಏನೆಂದು ಟೀಕಿಸಿದ್ದರು.
ಸುಮಲತಾ, ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ. ದಾಖಲೆ ಸಮೇತ ಆಣೆ-ಪ್ರಮಾಣ ಮಾಡೋಣ, ಯಾರು ಏನು ಎಂದು ಗೊತ್ತಾಗುತ್ತದೆ. ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಎಂದು ಜೆಡಿಎಸ್ ಶಾಸಕರಿಗೆ ಸವಾಲು ಎಸೆದಿದ್ದರು.
ನನ್ನ ಸಂಸದೆ ಸರ್ಟಿಫಿಕೇಟ್ ತರುತ್ತೇನೆ. ಅವರು ಅವರ ಎಂಎಲ್ಎ ಸರ್ಟಿಫಿಕೇಟ್ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲಿ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಾರೆ ಎಂದು ಜನರಿಗೆ ಗೊತ್ತಾಗುತ್ತದೆ. ನಾನು ಏನೂ ಸಾಬೀತು ಮಾಡಲು ಹೋಗುತ್ತಿಲ್ಲ. ಧೈರ್ಯವಿದ್ದರೆ ಮಾಧ್ಯಮಗಳ ಮುಂದೆಯೂ ಬರಲಿ. ದಾಖಲೆಗಳನ್ನು ತರಲು ಕಮಿಷನ್ ಕೊಟ್ಟಿರುವವರೇ ರೆಡಿ ಇದ್ದಾರೆ. ನಾನೇ ಸುಮ್ಮನೆ ಇರಿ, ಇಲ್ಲ ಅಂದರೆ ನಿಮ್ಮ ಗುತ್ತಿಗೆ ಕೆಲಸ ಹಾಳಾಗುತ್ತೆ ಎಂದು ಹೇಳಿದ್ದೇನೆ. ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆಂದು ಗುತ್ತಿಗೆದಾರರ ಸಂಘ ಹೇಳಿದೆ ಎಂದು ಸಂಸದೆ ಸುಮಲತಾ ಈ ಹಿಂದೆ ಹೇಳಿಕೆ ನೀಡಿದ್ದರು.