

ಮಂಡ್ಯ: ಜೆಡಿಎಸ್ ಶಾಸಕರ ವಿರುದ್ಧ ಇತ್ತೀಚೆಗೆ ಕಮಿಷನ್ ಆರೋಪ ಮಾಡಿದ್ದ ಸಂಸದೆ ಸುಮಲತಾ ಅಂಬರೀಷ್, ಮತ್ತೆ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಎದುರು ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲು ಎಸೆದಿದ್ದಾರೆ.
ಸಂಸದೆಯ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ನನ್ನ ಬಳಿಯೂ ದಾಖಲೆ ಇದ್ದು, ಬಿಡುಗಡೆ ಮಾಡುತ್ತೇನೆಂದಿದ್ದರು. ಅಂತೆಯೇ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲೆಗೆ ಸಂಸದೆ ಕೊಡುಗೆ ಏನೆಂದು ಟೀಕಿಸಿದ್ದರು. ಈ ಹೇಳಿಕೆ ಕುರಿತು ಸುಮಲತಾ ಇಬ್ಬರು ಶಾಸಕರ ವಿರುದ್ಧ ಅದರಲ್ಲಿಯೂ ಸಿಎಸ್ಪಿ ಬಗ್ಗೆ ವ್ಯಂಗ್ಯದ ಜತೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿ.ಹೊಸೂರು ಕಾಲನಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ. ದಾಖಲೆ ಸಮೇತ ಆಣೆ-ಪ್ರಮಾಣ ಮಾಡೋಣ, ಯಾರು ಏನು ಎಂದು ಗೊತ್ತಾಗುತ್ತದೆ. ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಎಂದು ಜೆಡಿಎಸ್ ಶಾಸಕರಿಗೆ ಸವಾಲು ಎಸೆದರು.
ನನ್ನ ಸಂಸದೆ ಸರ್ಟಿಫಿಕೇಟ್ ತರುತ್ತೇನೆ. ಅವರು ಅವರ ಎಂಎಲ್ಎ ಸರ್ಟಿಫಿಕೇಟ್ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲಿ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಾರೆ ಎಂದು ಜನರಿಗೆ ಗೊತ್ತಾಗುತ್ತದೆ. ನಾನು ಏನೂ ಸಾಬೀತು ಮಾಡಲು ಹೋಗುತ್ತಿಲ್ಲ. ಧೈರ್ಯವಿದ್ದರೆ ಮಾಧ್ಯಮಗಳ ಮುಂದೆಯೂ ಬರಲಿ. ದಾಖಲೆಗಳನ್ನು ತರಲು ಕಮಿಷನ್ ಕೊಟ್ಟಿರುವವರೇ ರೆಡಿ ಇದ್ದಾರೆ. ನಾನೇ ಸುಮ್ಮನೆ ಇರಿ, ಇಲ್ಲ ಅಂದರೆ ನಿಮ್ಮ ಗುತ್ತಿಗೆ ಕೆಲಸ ಹಾಳಾಗುತ್ತೆ ಎಂದು ಹೇಳಿದ್ದೇನೆ. ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆಂದು ಗುತ್ತಿಗೆದಾರರ ಸಂಘ ಹೇಳಿದೆ ಎಂದರು.