ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಗಂಡ... ಚೀರಾಡುತ್ತಾ ಗಂಡನನ್ನೇ ಬಿಗಿದಪ್ಪಿಕೊಂಡ ಪತ್ನಿ! ಮೈಸೂರಲ್ಲಿ ಭೀಕರ ಘಟನೆ

hug
Published on

ಮೈಸೂರು: ತಡರಾತ್ರಿ ಪತ್ನಿಗೆ ಬೆಂಕಿ ಹಚ್ಚಿ ಗಂಡ ಕೊಲೆ ಮಾಡಿದ್ದು, ಸಾವಿಗೂ ಮುನ್ನ ಆಕೆ ಬೆಂಕಿಯಿಂದ ಪಾರಾಗಲು ಬೆಂಕಿ ಹಚ್ಚಿದ ಗಂಡನನ್ನೇ ಅಪ್ಪಿಕೊಂಡಿದ್ದಾಳೆ. ಆದರೂ ಆಕೆ ಬದುಕಲಿಲ್ಲ. ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಗಂಡ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಇಂತಹ ದುರ್ಘಟನೆ ಕೆ.ಆರ್‌.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಪತ್ನಿ ರಾಜೇಶ್ವರಿ(28) ಮೃತಪಟ್ಟಿದ್ದಾಳೆ. ಪತಿ ಹರೀಶ್‌ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿಗೆ ರಾಜೇಶ್ವರಿ ಮತ್ತು ಹರೀಶ್​ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ರಾತ್ರಿಯೂ ಜಗಳ ನಡೆದಿದ್ದು, ಕುಪಿತಗೊಂಡ ಹರೀಶ್​, ಪತ್ನಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಚೀರಾಡಿಕೊಂಡೇ ಗಂಡನನ್ನು ಪತ್ನಿ ಕೂಡಲೇ ಬಿಗಿದಪ್ಪಿಕೊಂಡಿದ್ದಾಳೆ. ಪರಿಣಾಮ ಹರೀಶ್​ಗೂ ಬೆಂಕಿ ವ್ಯಾಪಿಸಿದೆ. ಇಬ್ಬರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಬೆಂಕಿ ನಂದಿಸಿದ್ದಾರೆ. ರಾಜೇಶ್ವರಿ ಮೃತಪಟ್ಟಿದ್ದು, ಹರೀಶ್​ ಸ್ಥಿತಿ ಗಂಭೀರವಾಗಿದೆ.

ವರದಕ್ಷಿಣೆಗಾಗಿ ಅಳಿಯ ಮತ್ತು ಆತನ ತಂದೆ- ತಾಯಿ ಸೇರಿಕೊಂಡು ಮಗಳು ರಾಜೇಶ್ವರಿಗೆ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ದೂರು ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net