ಸ್ವಿಗಿ, ಝೊಮ್ಯಾಟೊ ಸೇವೆಗಳಲ್ಲಿ ಕಡ್ಡಾಯ ಕನ್ನಡ ಬಳಸಲು ಕಾನೂನು ರೂಪಿಸಿ: ಸರ್ಕಾರಕ್ಕೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ | Kannada

ವಿಜಯವಾಣಿ - 2024-11-11T185242.426
Published on

ಬೆಂಗಳೂರು: ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ವಿಗಿ, ಝೊಮ್ಯಾಟೊನಂತಹ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರ್ಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಕನ್ನಡ (Kannada) ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ರವರಿಗೆ ಇಂದು ಪತ್ರ ಬರೆದಿರುವ ಡಾ.ಬಿಳಿಮಲೆ, "ಮನೆ ಮನೆಗೆ ಆಹಾರ ಸೇವೆ ಎನ್ನುವ ಆಧುನಿಕ ಸೇವಾ ವಲಯದಲ್ಲಿ ಕನ್ನಡ ಅವಗಣನೆಗೆ ಒಳಪಟ್ಟಿದೆ. ಈ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರದ ಸ್ವಾಗತಾರ್ಹ ನಿರ್ಧಾರದಲ್ಲಿ ಇಂತಹ ಸಂಸ್ಥೆಗಳ ಸೇವೆಗಳು ಕನ್ನಡ ಪರವಾಗಿ ಇರಬೇಕಾದುದು ಮುಖ್ಯವಾಗಿದೆ. ಇದಕ್ಕಾಗಿ ಸರ್ಕಾರವು ಉದ್ದೇಶಿಸಿರುವ ಸೇವಾ ಭದ್ರತಾ ಕಾಯ್ದೆಯಲ್ಲಿ ಸೂಕ್ತ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಗಿರುತ್ತದೆ" ಎಂದಿದ್ದಾರೆ.

"ಈ ಸೇವಾ ವಲಯಗಳು ರಾಜ್ಯದ ಬೃಹತ್ ನಗರಗಳನ್ನು ದಾಟಿ ಜಿಲ್ಲಾ, ತಾಲೂಕು ಹಂತಗಳಿಗೆ ತಮ್ಮ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇವುಗಳ ಆನ್​ಲೈನ್​ ಸಹಾಯ ಕೇಂದ್ರಗಳಲ್ಲಿ ಕನ್ನಡ ಭಾಷೆಗೆ ಯಾವುದೇ ಪ್ರಾತಿನಿಧ್ಯವನ್ನು ನೀಡದಿರುವುದು, ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸದಿರುವುದು ಸಹ ಒಂದು ರೀತಿಯಲ್ಲಿ ಆತಂಕ ತರುವ ಸಂಗತಿಯಾಗಿದೆ" ಎಂದರು.

"ಕಾನೂನಾತ್ಮಕವಾಗಿ ಸರ್ಕಾರವು ಆದ್ಯತೆಯ ಮೇರೆಗೆ ಈ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ವ್ಯಾಪಕವಾಗುವ, ಕನ್ನಡ ಭಾಷೆ ಅವಗಣನೆಗೆ ಒಳಗಾಗುವ ಎಲ್ಲ ಸಾಧ್ಯತೆಯನ್ನು ಹೊಂದಿರುತ್ತದೆ. ಹಾಗಾಗಿ ಸರ್ಕಾರದ ಉದ್ದೇಶಿತ ಕಾಯ್ದೆಯಲ್ಲಿ ಆಧುನಿಕ ಸೇವಾ ವಲಯಗಳ ಆನ್​ಲೈನ್ ಸೇವೆಗಳಲ್ಲಿ, ಐವಿಆರ್ ಕರೆಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾತಿನಿಧ್ಯವನ್ನು, ಕನ್ನಡ ಭಾಷೆಯ ಆಯ್ಕೆಯನ್ನು ಮತ್ತು ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಒದಗಿಸಬೇಕು ಎನ್ನುವ ಅಂಶವನ್ನು ಸಹ ಅಳವಡಿಸಿ ಈ ವಲಯಗಳಲ್ಲಿಯೂ ಕನ್ನಡಕ್ಕೆ ಅಗ್ರ ಪ್ರಾಶಸ್ತ್ಯವನ್ನು ದೊರಕಿಸಲು ಕ್ರಮವಹಿಸಬೇಕೆಂದು" ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net