

ವಿಜಯಪುರ: ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿಗಿಂತ ಹೆಚ್ಚಿನ ದರ ಕೊಡಬೇಕು. ವಾರದೊಳಗೆ ಸಭೆ ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರದೇ ಹೋದರೆ ಧರಣಿ ನಡೆಸಬೇಕಾಗುತ್ತದೆ ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆ ಪ್ರದೇಶದಲ್ಲಿ ವಿಜಯಪುರ ಜಿಲ್ಲೆ 3ನೇ ಸ್ಥಾನದಲ್ಲಿದ್ದು, ಸುಮಾರು 10 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿವರ್ಷ ಹೆಚ್ಚು ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಆದರೆ, ವೈಜ್ಞಾನಿಕವಾಗಿ ಬೆಲೆ ಸಿಗುತ್ತಿಲ್ಲ. ಈ ಬಾರಿಯಾದರೂ ಉತ್ತಮ ಬೆಲೆ ಸಿಗಲಿ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಪಡಿಸಿದ್ದು ಶೇ.10.25 ಸಕ್ಕರೆ ಇಳುವರಿಗೆ 3400 ರೂಗಳಂತೆ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿದ್ದು ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು. ಇದನ್ನು ಪರಿಷ್ಕರಣೆ ಮಾಡಬೇಕು. ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರು ಸಕ್ಕರೆ ಆಯುಕ್ತರನ್ನೊಳಗೊಂಡಂತೆ ರೈತರ ಸಮ್ಮುಖದಲ್ಲಿ ಸಭೆ ಸೇರಿದ ನಂತರ ಕಬ್ಬು ನುರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಕೇಂದ್ರ ಸರ್ಕಾರ ಹಿಂದಿನ ಹಂಗಾಮಿನ ಬೆಲೆಯನ್ನೇ ಈಗಲೂ ಮುಂದುವರೆಸಿದೆ. ಈ ಹಿಂದೆ ಇಂಥದ್ದೇ ನೀತಿಯಿಂದಾಗಿ ರೈತರು ನಷ್ಟ ಅನುಭವಿಸಬೇಕಾಯಿತು. ಹೀಗಾಗಿ 2024-25ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಸಕ್ಕರೆ ಇಳುವರಿ ಮಾನದಂಡ ಪ್ರತಿಶತ 9.5ಕ್ಕೆ 4500 ರೂ.ವರೆಗೆ ಎಫ್‌ಆರ್‌ಪಿ ದರ ನಿಗದಿ ಪಡಿಸಬೇಕು ಎಂದರು.
ಸಂಗಮೇಶ ಸಗರ ಮಾತನಾಡಿ, ಕಬ್ಬಿನಿಂದ ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಿ ಲಾಭ ಪಡೆಯುತ್ತಿರುವ ಸಕ್ಕರೆ ಕಾರ್ಖಾನೆಗಳು ಹಾಗೂ ಪ್ರತಿ ಟನ್ ಕಬ್ಬಿನಿಂದ 5000ಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಸರ್ಕಾರ ಅದರಲ್ಲಿ ಒಂದಿಷ್ಟು ಹಣ ರೈತರಿಗೆ ಮರಳಿ ನೀಡಿದರೆ ರೈತನ ಜೀವನ ಉದ್ದಾರ ಆಗಲಿದೆ. ಆದ್ದರಿಂದ ಕಾರ್ಖಾನೆಯವರು ‘ಎಚ್‌ಟಿ’ ಹೊರತುಪಡಿಸಿ 3500 ಹಾಗೂ ಸರ್ಕಾರಿ ತೆರಿಗೆಯಿಂದ 2000 ಕೊಟ್ಟು ಒಟ್ಟು 5500 ಹಣ ಕೊಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಮುಖಂಡರಾದ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಪಾಟೀಲ ಬ್ಯಾಲ್ಯಾಳ, ಸಂಗಪ್ಪ ಟಕ್ಕೆ, ಸೋಮು ಬಿರಾದಾರ, ರಾಮನಗೌಡ ಹಾದಿಮನಿ, ಸಂಗನಗೌಡ ಕೊಳುರ, ಹಣಮಂತ ಗುಣಕಿ, ಸುರೇಶ ಬಿರಾದಾರ, ಆನಂದ ಕುಲಕರ್ಣಿ ಮತ್ತಿತರರಿದ್ದರು.