ಕರೊನಾ ವೈರಸ್​ಗೆ ದೇವರ ಪಟ್ಟ:​ ನಡೆಯುತ್ತಿದೆ ನಿತ್ಯಪೂಜೆ!

corona
Published on

ಕೊಚಿ: ಕರೊನಾ ವೈರಸ್​ ಓಡಿಸಲು ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಔಷಧ ಕಂಡುಹಿಡಿಯುವಲ್ಲಿ ನಿರತರಾಗಿದ್ದರೆ, ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಈ ವೈರಸ್​ನಿಂದ ಮುಕ್ತಿ ಪಡೆಯಲು ಹವಣಿಸುತ್ತಿದ್ದಾರೆ.

ಇದೀಗ ಕೇರಳದ ನಿವಾಸಿ ಅನಿಲನ್​ ಎನ್ನುವವರು ತಮ್ಮ ದೇವರ ಪೀಠದಲ್ಲಿ ಕರೊನಾ ದೇವಿಯನ್ನು ಕುಳ್ಳರಿಸಿ ಅದಕ್ಕೆ ನಿತ್ಯವೂ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. "ನಾನು ಕರೊನಾವೈರಸ್​ ಅನ್ನು ದೇವತೆಯಾಗಿ ಪೂಜಿಸುತ್ತಿದ್ದೇನೆ ಮತ್ತು ಆರೋಗ್ಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ದಿನವೂ ಈ ದೇವಿಯ ಮೊರೆ ಹೋಗುತ್ತಿದ್ದೇನೆ ಎನ್ನುತ್ತಾರೆ ಇವರು.

ವೃತ್ತಿಪರರು, ಪೊಲೀಸ್ ಸಿಬ್ಬಂದಿ ಮತ್ತು ವಿಜ್ಞಾನಿಗಳು ಈ ವೈರಸ್​ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಇವುಗಳನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ. ಎಲ್ಲವೂ ಕೈ ಮೀರಿದಾಗ ಮನುಷ್ಯರು ಸಹಜವಾಗಿ ದೇವರ ಮೊರೆ ಹೋಗುತ್ತಾರೆ. ಆದ್ದರಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್​ ವಿರುದ್ಧ ನಾನು ಈ ದೇವಿಯದ್ದೇ ಮೊರೆ ಹೋಗಿದ್ದೇನೆ ಎನ್ನುತ್ತಾರೆ ಅನಿಲನ್​.

ಇವರ ಪೂಜೆಯ ಫೋಟೋ ವೈರಲ್​ ಆಗುತ್ತಿದ್ದಂತೆಯೇ ಹಲವಾರು ನೆಟ್ಟಿಗರು ಅನಿಲನ್​ ಕ್ರಮಕ್ಕೆ ಹಾಸ್ಯ ಮಾಡುತ್ತಿದ್ದಾರೆ. ಇದು ಪ್ರಚಾರದ ಗೀಳು, ಎಲ್ಲವೂ ಸುಮ್ಮನೇ ಪ್ರಚಾರದ ಹುಚ್ಚಿಗಾಗಿ ಮಾಡುತ್ತಿದ್ದಾರೆ ಇತ್ಯಾದಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತಮಗೆ ಯಾವುದೇ ಸಮಸ್ಯೆ ಇಲ್ಲ. ಹೇಳುವವರು ಹೇಳಿಕೊಳ್ಳಲಿ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಕರೊನಾ ದೇವಿ ಮೇಲೆ ನಂಬಿಕೆ ಇದೆ. ಇದನ್ನು ನಿತ್ಯವೂ ಪೂಜೆ ಮಾಡಿದರೆ ವೈರಸ್​ ನಮ್ಮನ್ನು ಬಾಧಿಸುವುದಿಲ್ಲ ಎಂದು ಧೈರ್ಯದಿಂದ ನುಡಿಯುತ್ತಾರೆ ಅನಿಲನ್​.

ದೇವಾಲಯಗಳು ಸೇರಿದಂತೆ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯುವ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿರುವ ಅನಿಲನ್, ಜನರು ಲಾಕ್​ಡೌನ್​ ನಿಯಮ ಮೀರಿ, ಹೊರಗಡೆ ಹೋಗಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಬದಲು ತಮ್ಮ ತಮ್ಮ ಮನೆಯಲ್ಲಿಯೇ ಈ ರೀತಿ ಪೂಜೆ ಸಲ್ಲಿಸಿದರೆ ಒಳ್ಳೆಯದು ಎನ್ನುತ್ತಾರೆ.

ಕೆಲವು ಮಂದಿ ಪೂಜಾ ಸಮಯದಲ್ಲಿ ದೇವಿಗೆ ಕಾಣಿಕೆ ನೀಡಲು ಬರುತ್ತಾರೆ ಎನ್ನುವ ಅನಿಲನ್​, ನಾನು ಯಾವುದೇ ಕಾರಣಕ್ಕೂ ಕಾಣಿಕೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ,

ಅಸ್ಸಾಂನ ಕೆಲವು ಭಾಗಗಳಲ್ಲಿ ಈಗಾಗಲೇ ಮಹಿಳೆಯರು 'ಕರೊನಾ ದೇವಿ'ಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಬಗ್ಗೆ ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net