

ನವದೆಹಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ಪತ್ರಕರ್ತ ವಿನೋದ್ ದುವಾರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ಭಾನುವಾರ ವಿಶೇಷ ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರು ಇವರನ್ನು ತನಿಖೆಗೆ ಒಳಪಡಿಸಬಹುದು. ಆದರೆ 24 ಗಂಟೆಗೂ ಮುಂಚೆ ಅವರಿಗೆ ವಿಚಾರಣೆಗೆ ಸಂಬಂಧಿಸಿದಂತೆ ನೋಟಿಸ್ ನೀಡಬೇಕು ಎಂದಿದೆ. ಇದೆ ವೇಳೆ ಜುಲೈ 6ರವರೆಗೆ ಅವರನ್ನು ಬಂಧಿಸದಂತೆಯೂ ಆದೇಶಿಸಿದೆ.
ಏನಿದು ಪ್ರಕರಣ: ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಬಗ್ಗೆ ಮನಸೋ ಇಚ್ಛೆ ವರದಿ ಮಾಡಿ, ಅದನ್ನು ಯೂಟ್ಯೂಬ್ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿರುವ ಆರೋಪ ವಿನೋದ್ ಅವರ ಮೇಲಿದೆ. ಸಿಎಎ ವಿರುದ್ಧ ದೆಹಲಿಯಲ್ಲಿ ಫೆಬ್ರುವರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೆಲವರ ಚಿತಾವಣಿ ಮೇರೆಗೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂಸಾಚಾರದ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದ ವಿನೋದ್, ಈ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದಿದ್ದರು.
ಮಾತ್ರವಲ್ಲದೇ ತಮ್ಮ ಯೂಟ್ಯೂಬ್ನಲ್ಲಿ 'ವಿನೋದ್ ದುವಾ ಶೋ' ಕಾರ್ಯಕ್ರಮದಲ್ಲಿ ಈ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರೇ ಕಾರಣ ಎಂಬಂತೆ ಬಿಂಬಿಸಿ ಜನರ ಹಾದಿಯನ್ನೂ ತಪ್ಪಿಸಿರುವ ಅರೋಪ ಎದುರಿಸುತ್ತಿದ್ದಾರೆ. ಸಾಲದು ಎಂಬುದಕ್ಕೆ ಕೆಲವೊಂದು ಖಂಡನಾರ್ಹ ಶಬ್ದಗಳ ಬಳಕೆ ಮಾಡಿರುವ ಆರೋಪ ಇವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಇವರ ವಿರುದ್ಧ ದೇಶದ್ರೋಹದ ದೂರು ದಾಖಲು ಮಾಡಿದ್ದಾರೆ. ಇದರ ಜತೆಗೆ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ದುವಾರ ಪ್ರತಿಕ್ರಿಯೆ ಕೀಳುಮಟ್ಟದ್ದಾಗಿತ್ತು. ಅಲ್ಲದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವ್ಯಾಪಂ ಹಗರಣ ನಡೆದಿತ್ತು ಎಂದು ಹೇಳಿದ್ದರು . ಇವೂ ಸೇರಿದಂತೆ ವಿನೋದ್ ಅವರು ಹಲವು ವಿಷಯಗಳ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನವೀನ್ ದೂರಿದ್ದಾರೆ.
ಈ ಸಂಬಂಧ ದುವಾರ ವಿರುದ್ಧ ಐಪಿಸಿ ಸೆಕ್ಷನ್ 290, 505 ಮತ್ತು 505(2) ಅಡಿ ದೂರು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಇದರ ರದ್ದತಿಗೆ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. (ಏಜೆನ್ಸೀಸ್)