

ಮನೌಸ್: ನಾಲ್ಕು ತಿಂಗಳ ಹಿಂದೆ ಈ ಮಹಾನಗರ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿತ್ತು. ಕೋವಿಡ್ನಿಂದ ಅದ್ಯಾವ ಮಟ್ಟಿಗೆ ಜನರು ಸಾವಿಗೀಡಾಗುತ್ತಿದ್ದರು ಎಂದರೆ, ಶವಗಳನ್ನು ಹೂಳೋದಕ್ಕೆ ಜಾಗವೇ ಇರಲಿಲ್ಲ. ಜೆಸಿಬಿಗಳಿಂದ ಗುಂಡಿ ತೋಡಿ ಮುಚ್ಚಿ ಹಾಕಲಾಗುತ್ತಿತ್ತು. ಶವಾಗಾರಗಳು ಸಾಲದೇ ಶೀತಲೀಕೃತ ವಾಹನಗಳಲ್ಲಿ ಶವಗಳನ್ನು ಇಡಲಾಗುತ್ತಿತ್ತು. ಆದರೆ, ಇಲ್ಲೀಗ ಭಾರಿ ಬದಲಾವಣೆಯಾಗಿದೆ.
ಸದ್ಯ ಅಮೆರಿಕ ಬಿಟ್ಟರೆ, ಹೆಚ್ಚು ಕೋವಿಡ್ ರೋಗಿಗಳಿರುವುದು ಹಾಗೂ ಸಾವು ಸಂಭವಿಸಿರುವುದು ಬ್ರೆಜಿಲ್ನಲ್ಲಿ. ಇಲ್ಲಿನ ಅಮೆಜೋನಾಸ್ ರಾಜ್ಯದ ರಾಜಧಾನಿ ಮನೌಸ್ನಲ್ಲಿ ಕೋವಿಡ್ ಅಟ್ಟಹಾಸವನ್ನೇ ಮೆರೆದಿತ್ತು. ನಾಲ್ಕು ತಿಂಗಳ ಬಳಿಕ ಇಲ್ಲಿನ ಪರಿಸ್ಥಿತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಈ ಮಹಾನಗರದಲ್ಲಿ ಹೊಸ ಕರೊನಾ ಸೋಂಕು ಪತ್ತೆಯಾಗುವ, ಕೋವಿಡ್ನಿಂದ ಆಸ್ಪತ್ರೆ ಸೇರುವ ಹಾಗೂ ವೈರಸ್ನಿಂದಾಗಿ ಸಾಯುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಕರೊನಾ ನಿಯಂತ್ರಣಕ್ಕೆ ಬಂದಿದೆ.
ಹಾಗಂತಾ ಭಾರಿ ಇಲ್ಲಿ ಕಟ್ಟುನಿಟ್ಟಿನ ಕ್ರಮ, ಲಾಕ್ಡೌನ್ ಕೈಗೊಂಡಿದ್ದಾರೆ ಎಂದೇನಲ್ಲ...! ಆದರೆ, ರೋಗದ ವಿರುದ್ಧ ಜನರಲ್ಲಿ ಸಾಮುದಾಯಿಕ ಪ್ರತಿರೋಧಕ ಶಕ್ತಿ (ಹರ್ಡ್ ಇಮ್ಯೂನಿಟಿ) ಉಂಟಾಗಿದೆ. ನೈಸರ್ಗಿಕವಾಗಿಯೇ ತಹಬಂಧಿಗೆ ಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದಟ್ಟ ಮಳೆಕಾಡಿನ ನಡುವೆ ಇರುವ ಈ ನಗರ ಕೋವಿಡ್ನಿಂದಾಗಿ ಅಕ್ಷರಶಃ ಭೂತದ ನಗರವಾಗಿ ಮಾರ್ಪಾಡಾಗಿತ್ತು. ಅಮೆಜೋನಾಸ್ನಲ್ಲಿ 18 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ರಾಜ್ಯದಲ್ಲಿ 1.16 ಲಕ್ಷ ಜನರು ಸೋಂಕಿತರಿದ್ದರೆ, 3,500ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಬ್ರೆಜಿಲ್ನ ಸಾವೋಪೌಲೋದಲ್ಲಿ ಸೋಂಕಿತರ ಸಂಖ್ಯೆ 7.60 ಲಕ್ಷ ದಾಟಿದೆ.
ಯುರೋಪ್ನ ಇತರ ನಗರಗಳಂತೆ ಇಲ್ಲಿ ಲಾಕ್ಡೌನ್ ಇರಲಿಲ್ಲ. ವ್ಯಕ್ತಿಗತ ಅಂತರ ಅಥವಾ ಫೇಸ್ ಮಾಸ್ಕ್ಗಳನ್ನು ಕಡ್ಡಾಯಗೊಳಿಸಿರಲಿಲ್ಲ. ಜೀವ ಉಳಿಸಿದರೂ ಆರ್ಥಿಕತೆಯನ್ನು ಹಳಿ ತಪ್ಪಿಸಿದ ಇಂಥ ಕ್ರಮಗಳಿಗೆ ಬ್ರೆಜಿಲ್ ಅಧ್ಯಕ್ಷರು ಕೂಡ ವಿರೋಧವಾಗಿದ್ದರು. ಕೋವಿಡ್ ಉತ್ತುಂಗಕ್ಕೆ ತಲುಪಿದಾಗ ಅದು ಅತ್ಯಂತ ಪ್ರಬಲವಾಗಿತ್ತು. ಹೀಗಾಗಿ ಸಮುದಾಯಿಕ ಪ್ರತಿರೋಧ ಶಕ್ತಿ ಉಂಟಾಗಿದೆ ಎಂದು ಪ್ಯಾನ್ ಅಮೆರಿಕನ್ ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕ ಜರ್ಬಾಸ್ ಬರ್ಬೋಸಾ ಡಸಿಲ್ವಾ ಹೇಳಿದ್ದಾರೆ.
ಆದರೆ, ಇದಕ್ಕಾಗಿ ಪಟ್ಟಣ ದೊಡ್ಡ ಬೆಲೆಯನ್ನು ತೆತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಪ್ರತಿ 500 ರೋಗಿಗಳಲ್ಲಿ ಒಬ್ಬ ಇಲ್ಲಿ ಮೃತಪಟ್ಟಿದ್ದಾನೆ. ಅಂದರೆ 3,500 ಜನ ಇಲ್ಲಿ ಸಾವೀಗೀಡಾಗಿದ್ದಾರೆ. ಬ್ರೆಜಿಲ್ ಹಾಗೂ ಅಮೆರಿಕದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ. ಅತಿ ಹೆಚ್ಚು ರೋಗಿಗಳು ಭಾರತದಲ್ಲಿ ಕಂಡುಬರುತ್ತಿದ್ದಾರೆ.