ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

vaccine
Published on

ನವದೆಹಲಿ: ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್​19 ನಿಗ್ರಹಿಸಲು ಈಗ 200ಕ್ಕೂ ಅಧಿಕ ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿವೆ. ಅದರಲ್ಲೂ 10ಕ್ಕೂ ಅಧಿಕ ಲಸಿಕೆಗಳು ಕೊನೆಯ ಹಂತದ ಪ್ರಯೋಗದಲ್ಲಿ ತೊಡಗಿವೆ.

ಅತ್ತ, ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ತಂಡ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಇತ್ತ, ಕೇಂಬ್ರಿಡ್ಜ್​ ವಿಶ್ವವಿದ್ಯಾಲಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಬಗೆಯ ಕರೊನಾ ವೈರಸ್​ಗಳನ್ನು ನಿಗ್ರಹಿಸುವ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ.

ಪ್ರಾಣಿಗಳು, ಮಾನವರ ಮೂಲಕ ಹರಡುವ, ರೂಪಾಂತರಗೊಳ್ಳುವ ಎಲ್ಲ ಬಗೆಯ ಕರೊನಾ ವೈರಸ್​ಗಳನ್ನು ನಾಶ ಮಾಡುವ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಸದ್ಯದಲ್ಲಿಯೇ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯ ಖಚಿತಪಡಿಸಿದೆ.

ಪರೀಕ್ಷಾರ್ಥ ಹಂತದಲ್ಲಿರುವ ಈ ಲಸಿಕೆಯನ್ನು DIOS-CoVax2 ಎಂದು ಹೆಸರಿಸಲಾಗಿದೆ. ಬಾವಲಿಗಳಿಂದ ಮನುಷ್ಯರಿಗೆ ಹಬ್ಬಿದ ಕರೊನಾವೈರಸ್​ ಸೇರಿ ಎಲ್ಲ ಬಗೆಯ ಕರೊನಾ ಮತ್ತದರ ರೂಪಾಂತರಿಗಳಿಗೆ ರಾಮಬಾಣವಾಗಲಿದೆ. ಇನ್ನೊಂದು ವಿಶೇಷವೆಂದರೆ, ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಈ ಲಸಿಕೆಯನ್ನು ಸೂಜಿಯ ಸಹಾಯವಿಲ್ಲದೇ, ಚರ್ಮದ ಮೂಲಕವೇ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

ಸಾರ್ಸ್​- ಸಿಒವಿ-2 (ಕೋವಿಡ್​19), ಇದರ ಸಂಬಂಧಿಗಳೇ ಎನ್ನಬಹುದಾದ ಸಾರ್ಸ್​, ಎಂಇಆರ್​ಎಸ್​ ಹಾಗೂ ಪ್ರಾಣಿಗಳಲ್ಲಿ ಕಂಡುಬರುವ ಆ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸುವ ಇತರ ಕರೊನಾ ವೈರಸ್​ನ ಮೂರು ಆಯಾಮಗಳ ಮಾದರಿಯನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂಬ್ರಿಡ್ಜ್​ ವಿವಿ ಪ್ರಾಧ್ಯಾಪಕ ಹಾಗೂ ಡಿಯೋಸಿನ್​ ವ್ಯಾಕ್ಸ್​ ಕಂಪನಿಯ ಸಂಸ್ಥಾಪಕ ಜೋನ್ನಾಥನ್​ ಹೀನೇ ಹೇಳಿದ್ದಾರೆ.

ವೈರಸ್​ ಬತ್ತಳಿಕೆಯಲ್ಲಿರಬಹುದಾದ ಎಲ್ಲ ಮಾದರಿ ಶಸ್ತ್ರಗಳಿಗೂ ಪ್ರತ್ಯಾಸ್ತ್ರಗಳನ್ನು ತಯಾರಿಸಲಾಗುತ್ತಿದೆ. ಅಂದರೆ, ಲಸಿಕೆ ವೈರಸ್​ಗೆ ತಕ್ಕ ಪ್ರತಿರೋಧ ಶಕ್ತಿಯನ್ನು ಉಂಟು ಮಾಡಲಿದೆ. ಇದರಿಂದ ಕೋವಿಡ್​ ಮಾತ್ರವಲ್ಲ, ಉಳಿದೆಲ್ಲ ಕರೊನಾ ಕಾಯಿಲೆಗಳಿಗೆ ಲಸಿಕೆ ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಅಂತ್ಯಕ್ಕೆ ಮಾನವರ ಮೇಲಿನ ಪ್ರಯೋಗಕ್ಕೆ ಲಸಿಕೆ ಸಜ್ಜಾಗಬಹುದು ಎಂದು ನಿರೀಕ್ಷೆ ಹೊಂದಲಾಗಿದೆ. ಕರೊನಾ ವೈರಸ್​ ಈಗಿನಕ್ಕಿಂತಲೂ 10 ಪಟ್ಟು ಹೆಚ್ಚು ಮಾರಕವಾಗಿ ರೂಪಾಂತರ ಹೊಂದಿದೆ. ಇದರ ಕುರುಹು ಮಲೇಷ್ಯಾದಲ್ಲಿ ಪತ್ತೆಯಾಗಿದೆ. ಹೀಗಿರುವಾಗ ಹೊಸ ಲಸಿಕೆ ನಿಜಕ್ಕೂ ಆಶಾದಾಯಕ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net