ಒಝೋನ್​ ಅನಿಲದಿಂದ ನಿಗ್ರಹಿಸಬಹುದು ಕರೊನಾ ವೈರಸ್​; ಜಪಾನ್​ ತಜ್ಞರಿಂದ ಸಂಶೋಧನೆ

Corona
Published on

ನವದೆಹಲಿ: ವಾತಾವರಣದಲ್ಲಿರುವ ಕರೊನಾ ವೈರಸ್​ಗಳನ್ನು ನಿಗ್ರಹಿಸಲು ಒಝೋನ್​ ಪರಿಣಾಮಕಾರಿಯಾಗಿದೆ...!

ಜಪಾನ್​ನ ತಜ್ಞರು ಕಂಡುಕೊಂಡಿರುವ ಸತ್ಯವಿದು. ಮುಚ್ಚಿದ ಚೇಂಬರ್​ನಲ್ಲಿ ಕರೊನಾ ವೈರಸ್​ನ ಮಾದರಿಗಳನ್ನು ಬಳಸಿ ನಡೆಸಿದ ಪ್ರಯೋಗದಲ್ಲಿ ಈ ಫಲಿತಾಂಶ ಕಂಡು ಬಂದಿದೆ. ಓಝೋನ್​ ಅನಿಲವು ಕರೊನಾ ವೈರಸ್​ ಕಣಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದು ಗೊತ್ತಾಗಿದೆ.

ಇದರಿಂದ ಆಸ್ಪತ್ರೆಗಳಲ್ಲಿ ರೋಗಿಯ ತಪಾಸಣೆ ಕೊಠಡಿ ಹಾಗೂ ನಿರೀಕ್ಷಣಾ ಪ್ರದೇಶಗಳಲ್ಲಿನ ಸೋಂಕು ನಿವಾರಿಸಲು ಈ ವಿಧಾನ ಅತ್ಯಂತ ಪ್ರಶಸ್ತವಾಗಿದೆ ಎಂದು ಹೇಳಲಾಗಿದೆ.

ಫುಜಿಟಾ ಆರೋಗ್ಯ ವಿವಿಯ ತಜ್ಞರು ಈ ವಿಷಯ ತಿಳಿಸಿದ್ದಾರೆ. ಒಝೋನ್​ ಅನಿಲದ 0.05ದಿಂದ 0.1 ಪಿಪಿಎಂ ( ಪಾರ್ಟ್ಸ್​ ಪರ್​ ಮಿಲಿಯನ್​) ಪ್ರಮಾಣವು ಮಾನವರಿಗೆ ಹಾನಿಕಾರಕವಲ್ಲ. ಆದರೆ, ಕರೊನಾ ವೈರಸ್​ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಚ್ಚಿದ ಚೇಂಬರ್​ನಲ್ಲಿ ಕರೊನಾ ವೈರಸ್​ಗಳನ್ನು ಬಿಟ್ಟು, ಒಝೋನ್​ ಅನಿಲವನ್ನು ಹರಿಸಲಾಗಿತ್ತು. ಕಡಿಮೆ ಪ್ರಮಾಣದಲ್ಲಿ 10 ತಾಸುಗಳವರೆಗೆ ಹರಿಸಿದ ಅನಿಲದಿಂದಾಗಿ ಕರೊನಾ ವೈರಸ್​ ಪ್ರಮಾಣ ಶೇ.90 ಕಡಿಮೆಯಾಗಿರುವುದು ಕಂಡುಬಂದಿದೆ. ನಿರಂತರವಾಗಿ ಕಡಿಮೆ ಪ್ರಮಾಣದಲ್ಲಿ ಓಜೋನ್​ ಅನಿಲ ಹರಿಸುತ್ತಿದ್ದರೆ ಕರೊನಾ ವೈರಸ್​ಗಳನ್ನು ನಿಯಂತ್ರಿಸಬಹುದು. ಜನರಿರುವ ಸಂದರ್ಭದಲ್ಲೂ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಅದರಲ್ಲೂ ಹೆಚ್ಚಿನ ಆರ್ರ್ದತೆ ಇರುವ ಸನ್ನಿವೇಶದಲ್ಲಿ ಅಥವಾ ವಾತಾವರಣದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಒಝೋನ್​ ಆಮ್ಲಜನಕದ ಮಾಲಿಕ್ಯೂಲ್​ ಆಗಿದ್ದು, ಹಲವು ವೈರಸ್​ಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಹೊಂದಿದೆ. ಈ ಹಿಂದೆಯೂ ಇದರ ಹೆಚ್ಚಿನ ಸಾಂದ್ರತೆ (1- 6 ಪಿಪಿಎಂ) ಕರೊನಾಗೆ ಮಾರಕವಾಗಲಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದರಿಂದ ಮಾನವರಿಗೂ ಅಪಾಯ ಸಂಭವಿಸಬಲ್ಲದು ಎಂದು ಕಂಡುಕೊಳ್ಳಲಾಗಿತ್ತು.

ವೈದ್ಯರು ಬಳಸಿದ ಪಿಪಿಇ ಕಿಟ್​ನ ಸೋಂಕು ನಿವಾರಣೆಗೆ ಒಝೋನ್​ ಬಳಸಬಹುದು ಎಂದು ಜಾರ್ಜಿಯಾ ತಾಂತ್ರಿಕ ಸಂಸ್ಥೆ ಸಂಶೋಧಕರು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net