

ನವದೆಹಲಿ: ಆರ್ಥಿಕ ಚಟುವಟಿಕೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದ್ದರೂ, ಶಾಲಾ- ಕಾಲೇಜು ಆರಂಭಕ್ಕೆ ದೇಶದಲ್ಲಿ ಸದ್ಯಕ್ಕಂತೂ ಅವಕಾಶವಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಆದರೆ, ಕರೊನಾ ಕೇಸ್ಗಳು ಗಣನೀಯವಾಗಿ ಇಳಿಕೆಯಾಗಿದ್ದ ಹಲವು ದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಅವುಗಳನ್ನು ಕೂಡ ಬಂದ್ ಮಾಡಲಾಗುತ್ತಿದೆ.
ದಕ್ಷಿಣ ಕೊರಿಯಾದ ರಾಜಧಾನಿಯಲ್ಲಿ ಕರೊನಾ ವೈರಸ್ ಸೋಂಕಿನ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳನ್ನು ಮತ್ತೆ ಬಂದ್ ಮಾಡಲಾಗಿದೆ. ಸಿಯೋಲ್ನಲ್ಲಿ ಕಳೆದ 12 ದಿನಗಳಿಂದ ನಿತ್ಯವೂ ನೂರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕರೊನಾ ನಿಯಂತ್ರಿಸುವಲ್ಲಿ ಪಟ್ಟಿದ್ದ ಶ್ರಮ ನಿಷ್ಪ್ರಯೋಜಕವಾಯ್ತೇ ಎಂಬ ಅನುಮಾನ ಮೂಡಿಸಿದೆ.
ಕಳೆದ ಎರಡು ವಾರಗಳಲ್ಲಿ ಸಿಯೋಲ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 193 ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಂಡುಬಂದಿದೆ ಎಂದು ಶಿಕ್ಷಣ ಸಚಿವ ಯೂ ಎನ್ ಹೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿಶುವಿಹಾರ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು ಸೆ.11ರವರೆಗೆ ಆನ್ಲೈನ್ ಮೂಲಕವೇ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಕಳೆದ 12 ದಿನಗಳಲ್ಲಿ 3,175 ಹೊಸ ಕೇಸ್ಗಳನ್ನು ಪತ್ತೆ ಹಚ್ಚಲಾಗಿದ್ದರೆ, ಒಟ್ಟಾರೆ ಸೋಂಕಿತರ ಸಂಖ್ಯೆ 17,945ಕ್ಕೆ ಏರಿಕೆಯಾಗಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 310 ಆಗಿದೆ.
ಸದ್ಯ ದೇಶದಲ್ಲಿ ಸಭೆ- ಸಮಾರಂಭಗಳಿಗೆ ನಿಷೇಧ ವಿಧಿಸಲಾಗಿದೆ. ನೈಟ್ಸ್ಪಾಟ್ ಹಾಗೂ ಚರ್ಚ್ಗಳನ್ನು ಕೂಡ ಬಂದ್ ಮಾಡಲಾಗಿದೆ. ದೇಶಾದ್ಯಂತ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಫ್ಯಾನ್ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ವೈರಸ್ ಹಬ್ಬುವುದು ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ.