

ನವದೆಹಲಿ: ದಂಪತಿಗಳ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ದಕ್ಷಿಣ ಭಾಗದಲ್ಲಿರುವ ಕಿಶನ್ಗಢ ಎಂಬ ಪ್ರದೇಶದಲ್ಲಿ ನಡೆದಿದೆ.
ಘಟನೆ ಶನಿವಾರ ಸಂಜೆ ನಡೆದಿದ್ದು, ಮೃತ ದುರ್ದೈವಿಯನ್ನು ರಾಬಿನ್ ಶ್ರೇಷ್ಟಾ(25) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮಣಿಪುರ ಮೂಲದ ಮಿಂಗ್ಚಾಂಗ್ ಅಲಿಯಾಸ್ ಜಿಮ್ಮಿ(26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮನೆಯಲ್ಲಿ ಎಸಿ ಇಲ್ಲದ ಕಾರಣ ಆರೋಪಿ ಜಿಮ್ಮಿ ಹೆಂಡತಿ ಹಾಗೂ ಮಗನ ಜೊತೆಗೆ ರಾಬಿನ್ ಮನೆಯಲ್ಲಿ ವಾಸವಿದ್ದ. ಶನಿವಾರ ರಾಬಿನ್ನ ಮನೆಯಲ್ಲಿ ಆರೋಪಿ ಮಧ್ಯ ಸೇವಿಸಿದ್ದು, ತನ್ನ ಹೆಂಡತಿ ಜೊತೆ ಜಗಳವಾಡಲು ಶುರು ಮಾಡಿದ್ದಾನೆ.
ಇದನ್ನು ಗಮನಿಸಿದ ರಾಬಿನ್ ಹಾಗೂ ಆತನ ಗೆಳತಿ ದಂಪತಿಗಳ ನಡುವಿನ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಪಾನಮತ್ತನಾಗಿದ್ದ ಆರೋಪಿ ಜಿಮ್ಮಿ ಇದು ತನ್ನ ದಾಂಪತ್ಯದ ವಿಚಾರವಾಗಿದ್ದು, ಇದರಲ್ಲಿ ತಲೆ ಹಾಕದಂತೆ ಎಚ್ಚರಿಸಿದ್ದಾನೆ. ಈ ವೇಳೆ ರಾಬಿನ್ ಹಾಗೂ ಜಿಮ್ಮಿ ನಡುವಿನ ಜಗಳ ತಾರಕಕ್ಕೇರಿದ್ದು, ಆರೋಪಿ ಜಿಮ್ಮಿ ರಾಬಿನ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ರಾಬಿನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಜಿಮ್ಮಿ ವಿರುದ್ಧ ಭಾರತ ದಂಡ ಸಂಹಿತೆ (IPC Section) 302ರ ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದ್ದು, ಶೀಘ್ರದಲ್ಲೇ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.