ಸನಾತನ ಹೇಳಿಕೆ ವಿವಾದ; ಸಚಿವ ಉದಯನಿಧಿ ಸ್ಟಾಲಿನ್​ ಮಾತನಾಡಿರುವುದರಲ್ಲಿ ತಪ್ಪೇನಿದೆ: ನಟ ಪ್ರಕಾಶ್​ ರಾಜ್​

Prakash Raj (3)
Published on

ಕಲಬುರಗಿ: ಸನಾತನ ಧರ್ಮ ನಿರ್ಮೂಲಮನೆ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​ ಮಾತನಾಡಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ನಟ, ಚಿಂತಕ ಪ್ರಕಾಶ್​ ರಾಜ್​ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್​ ರಾಜ್​ ರಾಜಕಾರಣಿಗಳು ಏನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಕಾಶ್​ ರಾಜ್​ ನಾನು ಯಾವುದೇ ಧರ್ಮ ವಿರೋಧಿ ಅಲ್ಲ. ನಾವು ಯಾವುದೇ ಧರ್ಮದ ಬಗ್ಗ ಮಾತನಾಡುತ್ತಿಲ್ಲ. ನಾನು ಜನರನ್ನು ಪ್ರೀತಿಸುವ ಮನುಷ್ಯ. ರಾಜಕಾರಣಿಗಳು ಏನಾದರೂ ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ, ರೋಗ ಅವರಿಗೆ ಬಂದಿರುವುದು ನನಗಲ್ಲ ಎಂದಿದ್ದಾರೆ.

ಮಾತನಾಡಿರುವುದರಲ್ಲಿ ತಪ್ಪೇನಿದೆ

ಸಚಿವ ಉದಯನಿಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿದೆ. ಅಸ್ಪೃಶ್ಯತೆ ಹೋಗಬೇಕು ಎನ್ನುವ ನಿಟ್ಟಿನಲ್ಲಿ ಅವರು ಮಾತನಾಡಿದ್ದಾರೆ. ಆದರೆ, ಕೆಲವರು ಅವರ ಹೇಳಿಕೆಯನ್ನು ತಿರುಚಿ ಇಲ್ಲಸಲ್ಲದ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಜಾತಿಗಳ ನಡುವೆ ವಿವಾದ ಹುಟ್ಟು ಹಾಕೋರಿಗೆ ಬೇರೆ ಕೆಲಸವಿಲ್ಲದ ಕಾರಣ ಈ ರೀತಿ ಮಾಡುತ್ತಿದ್ದಾರೆ.

ನಾನು ನನ್ನ ಪ್ರತಿಭೆಯಿಂದಲ್ಲ ಜನರ ಪ್ರೀತಿಯಿಂದ ಬೆಳೆದವನು. ಜನರಿಗಾಗಿ ನಾನು ಧ್ವನಿ ಎತ್ತಬೇಕಲ್ಲವೇ. ನಾನು ಜನಪರ ವ್ಯಕ್ತಿ ರಾಜಕೀಯದವನಲ್ಲ. ಅವರವರ ಧರ್ಮ, ನಂಬಿಕೆ ಅವರಿಗೆ ಬಿಟ್ಟ ವಿಚಾರ. ಎಲ್ಲರೂ ಚೆನ್ನಾಗಿರಬೇಕು. ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಭಾಷಣಕ್ಕಾಗಿ ಅಲ್ಲ ಜೀವನದಲ್ಲಿ ಅಳವಡಿಸಿಕೊಳ್ಳುವುದಿಕ್ಕೆ.

ಕೋಮು ಗಲಭೆಯಿಂದ ಹಾನಿಯಾಗುತ್ತಿರುವುದು ಹೆಣ್ಣು ಮಕ್ಕಳಿಗೆ. ಅದರಿಂದ ನಾವೇ ಸಮಸ್ಯೆ ಅನುಭವಿಸಬೇಕಿದೆ. ಅವರು ವಿಶ್ವಗುರು ಆಗಲಿ, ನಾವು ವಿಶ್ವ ಮಾನವ ಆಗೋಣ ಎಂದು ನಟ ಪ್ರಕಾಶ್​ ರಾಜ್​ ಸನಾತನ ಕುರಿತು ಮಾತನಾಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net