ಹಣ ವಾಪಾಸ್​ ಕೊಡದ ಸ್ನೇಹಿತ; ಅದಕ್ಕೆ ಈತ ಮಾಡಿಕೊಂಡಿದ್ದೇನು ಗೊತ್ತಾ? ಕೇಳಿದ್ರೆ ಹೀಗೂ ಇರ್ತಾರಾ ಅನಿಸುತ್ತೆ!

ವಿಜಯವಾಣಿ - 2024-01-11T141450.934
Published on

ಗ್ರೇಟರ್ ನೋಯ್ಡಾ: ತಾನು ಕೊಟ್ಟ ಸಾಲದ ಹಣವನ್ನು ಮರುಪಾವತಿ ಮಾಡು ಎಂದು ಎಷ್ಟು ಬಾರಿ ಹೇಳಿದರು ಕೂಡ ದುಡ್ಡು ವಾಪಾಸ್​ ಮಾಡದ ಸ್ನೇಹಿತನ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬ ಆತನ ಮೇಲೆ ಏಕಾಏಕಿ ದಾಳಿ ಮಾಡಿ, ತನ್ನ ತೋಳಿಗೆ ಗುಂಡು ಹಾರಿಸಿಕೊಂಡ ಘಟನೆ ಗ್ರೇಟರ್ ನೋಯ್ಡಾದ ಕಾಂತ್ ಮಂಡಿ ಪ್ರದೇಶದಲ್ಲಿ ವರದಿಯಾಗಿದೆ.

ಬೆಳಗ್ಗೆ 8.30ರ ಸುಮಾರಿಗೆ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತ್ ಮಂಡಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಯುವಕನೊಬ್ಬ ತನ್ನ ಸ್ನೇಹಿತ ಸಾಲದ ಹಣ ಹಿಂತಿರುಗಿಸಲಿಲ್ಲ ಎಂದು ಬೇಸತ್ತು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ಆತ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದನಾ? ಕೊಟ್ಟ ಹಣವೆಷ್ಟು? ಎಂಬುದರ ವಿವರ ಹೀಗಿದೆ.

ತನುಜ್ ನಾಗರ್ ಎಂದು ಗುರುತಿಸಲಾದ ವ್ಯಕ್ತಿ, ಎರಡು ವರ್ಷಗಳ ಹಿಂದೆ ರಿಷಬ್ ಗುಪ್ತಾಗೆ ಎಂಬಾತನಿಗೆ ಸುಮಾರು 15 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಮರುಪಾವತಿ ವಿಳಂಬವಾಗುತ್ತಿದೆ, ಕೂಡಲೇ ವಾಪಾಸ್ ಮಾಡು ಎಂದು ತನುಜ್​ ಆರೋಪಿಸಿದ್ದಾರೆ. ನಾಗರ್ ದೂರವಾಣಿ ಕರೆಯ ಮೇರೆಗೆ ಹಣ ಕೊಡಲು ಗುಪ್ತಾ ಮನೆಗೆ ಆಗಮಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮನೆಯೊಳಗೆ ಕುಳಿತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಗುಪ್ತಾ ಮೇಲೆ ಹಲ್ಲೆಗೈದ ನಾಗರ್​, ತಾನು ತಂದಿದ್ದ ಗನ್​ ತೆಗೆದು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದಾನೆ. ಈ ಮೂಲಕ ಗುಪ್ತಾ ಮೇಲೆ ಆರೋಪವನ್ನು ಹೊರಿಸಿ, ಆತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನುಜ್​ ಮಾಡಿದ ಪ್ಲಾನ್ ಎಂಬುದು ವಿಚಾರಣೆ ಬಳಿಕ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ತನುಜ್ ನಾಗರ್ ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net