

ಬೆಂಗಳೂರು: ಈಗಲೂ ಹಲವೆಡೆ ಮುಟ್ಟನ್ನು ಮೈಲಿಗೆ ಎಂಬಂತೆಯೇ ನೋಡಲಾಗುತ್ತಿದೆ. ಋತುಮತಿಯಾದ ಸಂದರ್ಭದಲ್ಲಿ ಹೆಣ್ಣನ್ನು ಅಸ್ಪ್ರಶ್ಯವಾಗಿ ನೋಡುವುದು ಒಂದೆಡೆಯಾದರೆ, ಮುಟ್ಟಿನ ಬಗ್ಗೆ ಹುಡುಗರು ಮಾತಾಡುವುದು ಮುಜುಗರ ಎನ್ನುವಂಥ ಪರಿಸ್ಥಿತಿಯೂ ಕೆಲವೆಡೆ ಇದೆ. ಆದರೆ ಇಲ್ಲೊಂದು ಕಡೆ ತಾಯಿ ಮುಟ್ಟಾದಾಗ ಗಂಡು ಮಕ್ಕಳೇ ಆಕೆಯ ಆರೈಕೆ ಮಾಡುತ್ತಾರೆ. ಅದಕ್ಕೆಂದೇ ಈ ಮನೆಯಲ್ಲಿ ಗಂಡ-ಗಂಡುಮಕ್ಕಳು ಟೀಮ್ ಆಗಿ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ.
ಇದರ ಬಗ್ಗೆ ಆ ಮನೆಯೊಡತಿಯ ಪುತ್ರರಲ್ಲಿ ಒಬ್ಬರಾಗಿರುವ ಅನಿಶ್ ಭಗತ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾನೆ. ನಮ್ಮ ತಂದೆ ನಮಗೆ 13ನೇ ವಯಸ್ಸಿನಲ್ಲೇ ಪೀರಿಯಡ್ಸ್ ಬಗ್ಗೆ ಅರಿವು ಮೂಡಿಸಿದ್ದರು. ಮಾತ್ರವಲ್ಲ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದರು. ಅನಿಶ್ ಮತ್ತು ಆತನ ಸಹೋದರ, ತಂದೆ ಮೂವರೂ ಮನೆಯೊಡತಿಯ ಸೇವೆಗೆಂದೇ 'ಭಗತ್ ಮೆನ್' ಎಂಬ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಾರೆ.
ಅಮ್ಮನಿಗೆ ಪೀರಿಯಡ್ ಆದಾಗ ನಾವೇ ಹೋಗಿ ಅವರಿಗೆ ಫ್ರೆಷ್ ಪ್ಯಾಡ್ ತಂದು ಕೊಡುತ್ತೇವೆ. ಒಂದೊಂದು ತಿಂಗಳಿಗೆ ಒಬ್ಬರಂತೆ ನಾವು ಈ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ. ಈ ತಿಂಗಳಲ್ಲಿ ಇದು ನನ್ನ ಜವಾಬ್ದಾರಿ ಎಂದು ಅನಿಶ್ ಅಮ್ಮನ ಸೇವೆ ಮಾಡುತ್ತಿರುವ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ಅಮ್ಮ ಮುಟ್ಟಾದಾಗ ಮಾತ್ರವಲ್ಲ, ಆಕೆಗೆ ಅನಾರೋಗ್ಯವಾದಾಗಲೂ ನಾವು ಆಕೆಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ. ಕಳೆದ 6 ವರ್ಷಗಳಿಂದ ಆಕೆ ಪೀರಿಯಡ್ಸ್ ಸಲುವಾಗಿ ಪ್ಯಾಡ್ ತರಲು ಹೊರಗೆ ಹೋಗಿಲ್ಲ, ನಾವೇ ತಂದು ಕೊಡುತ್ತಿರುವುದಾಗಿ ಅನಿಶ್ ಹೇಳಿದ್ದಾರೆ.
ಈ ಮನೆಯ ಪುರುಷರ ಈ ಸೇವೆಯ ಕುರಿತ ವಿಡಿಯೋಗೆ ಇನ್ಸ್ಟಾಗ್ರಾಮ್ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಅನಿಶ್ ಈ ಕುರಿತು ಮಾಡಿರುವ ಪೋಸ್ಟ್ಗೆ 20 ಲಕ್ಷ ಮಂದಿ ಮೆಚ್ಚುಗೆ ಸೂಚಿಸಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿ, ಪ್ರಶಂಸಿಸಿದ್ದಾರೆ.