

ರಾಮನಗರ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೈವನರ್ತಕರೊಬ್ಬರು ದೈವಾರಾಧನೆಯ ನೃತ್ಯದ ವೇಳೆ ಕುಸಿದು ಬಿದ್ದು ಸಾವಿಗೀಡಾದ ಪ್ರಕರಣ ನಡೆದು ಮೂರು ದಿನ ಕಳೆಯುವಷ್ಟರಲ್ಲಿ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಮುಂದುವರಿದಿವೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾವತ್ತೂರಮ್ಮನ ಅರ್ಚಕ ನಾಗರಾಜು (45) ಸಾವಿಗೀಡಾದ ವ್ಯಕ್ತಿ. ಇವರು ಕುಸಿದು ಬಿದ್ದು ಸಾವಿಗೀಡಾದ್ದರಿಂದ ಈ ಜಾತ್ರೆ ಅರ್ಧಕ್ಕೇ ನಿಂತುಹೋಗಿದೆ.
ಅರ್ಚಕ ನಾಗರಾಜು ಜಾತ್ರೆಯಲ್ಲಿ ಕೊಂಡ ಹಾಯಲು ಕಳಶ ಹೊತ್ತು ತೆರಳುತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದು ಇವರು ಸಾವಿಗೀಡಾಗಿದ್ದು, ಊರವರು ಮತ್ತು ಭಕ್ತರಲ್ಲಿ ದಿಗ್ಭ್ರಮೆ ಮೂಡಿಸಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಮಾ.30ರ ರಾತ್ರಿ 2 ಗಂಟೆ ಸುಮಾರಿಗೆ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವದಲ್ಲಿ ಕಾಂತು ಅಜಿಲ ಮೂಲಂಗೀರಿ (55) ದೈವನರ್ತನದ ವೇಳೆಯೇ ಕುಸಿದು ಬಿದ್ದು ಸಾವಿಗೀಡಾಗಿದ್ದರು.