ಕ್ಯಾಡ್ಬರಿ ಚಾಕೊಲೇಟ್‌ ತಿನ್ನುವಾಗ 'ಹುಳುಗಳು' ಪತ್ತೆ! ತಕ್ಷಣವೇ ರಿಪೋರ್ಟ್​ ಮಾಡಿದವನಿಗೆ ಪ್ರಯೋಗಾಲಯ ವರದಿ ಹೇಳಿದ್ದಿಷ್ಟು

Untitled design - 2024-02-29T142016.106
Published on

ತೆಲಂಗಾಣ: ವ್ಯಕ್ತಿಯೊಬ್ಬರು ಸ್ಥಳೀಯ ಅಂಗಡಿಯಿಂದ ತಿನ್ನಲು ಚಾಕೋಲೇಟ್​ ಖರೀದಿಸಿದ್ದು, ಅದರಲ್ಲಿ ಹುಳಗಳು ಇರುವುದನ್ನು ಗಮನಿಸಿ ಕೂಡಲೇ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಯೋಗಲಾಯವು ಎರಡು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್‌ಗಳಲ್ಲಿ ಬಿಳಿ ಹುಳುಗಳನ್ನು ಪತ್ತೆಹಚ್ಚಿದ್ದು, ವರದಿಯಲ್ಲಿ ಇಂತಹ ಚಾಕೊಲೇಟ್‌ಗಳ ಸೇವನೆ ಅಸುರಕ್ಷಿತ ಎಂದು ಸ್ಪಷ್ಟಪಡಿಸಿದೆ.

ಕಾರ್ಯಕರ್ತ ರಾಬಿನ್ ಜಾಕಿಯಸ್ ಎಂಬುವವರು ಹೈದರಾಬಾದ್‌ನ ಅಮೀರ್‌ಪೇಟ್‌ನ ಸೂಪರ್‌ಮಾರ್ಕೆಟ್‌ನಿಂದ ಖರೀದಿಸಿದ ಚಾಕೊಲೇಟ್‌ಗಳಲ್ಲಿ ಹುಳುಗಳು ಕಂಡುಬಂದ ಕೂಡಲೇ ಪರೀಕ್ಷೆಗೆ ಕಳುಹಿಸಿದ್ದಾರೆ. ಬುಧವಾರ ಅವರು ತಮ್ಮ ಎಕ್ಸ್​ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ಬಿಡುಗಡೆಗೊಳಿಸಿದ ವರದಿಯನ್ನು ಹಂಚಿಕೊಂಡಿದ್ದಾರೆ. ಪರೀಕ್ಷೆಗೆ ಕಳುಹಿಸಲಾದ ಎರಡು ಚಾಕೊಲೇಟ್‌ಗಳಾದ ಕ್ಯಾಡ್ಬರಿಸ್ ಡೈರಿ ಮಿಲ್ಕ್ ರೋಸ್ಟೆಡ್ ಆಲ್​ಮಂಡ್​ ಮತ್ತು ಕ್ಯಾಡ್ಬರಿಸ್ ಡೈರಿ ಮಿಲ್ಕ್ ಫ್ರೂಟ್ ಅಂಡ್ ನಟ್ ಎಂದು ಉಲ್ಲೇಖಿಸಿದ್ದಾರೆ.

"ಮಾದರಿಯು ಬಿಳಿ ಹುಳುಗಳು ಹೊಂದಿದೆ ಮತ್ತು ಆದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಅಸುರಕ್ಷಿತವೆಂದು ಪರಿಗಣಿಸಲಾಗಿದೆ" ಎಂದು ಪ್ರಯೋಗಾಲಯದ ವರದಿ ತಿಳಿಸಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿರುವ ಝಾಕಿಯಸ್, ಮಕ್ಕಳು ಹೆಚ್ಚಾಗಿ ಸೇವಿಸುವ ಅಸುರಕ್ಷಿತ ಆಹಾರವನ್ನು ಪೂರೈಸುವ ಎಫ್‌ಎಂಸಿಜಿ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ದಂಡ ವಿಧಿಸಲು ಇದು ಸೂಕ್ತ ಸಮಯ ಎಂದು ಒತ್ತಿ ಹೇಳಿದ್ದಾರೆ.

ಇಂತಹ ಕೆಲಸ ಮುಂದುವರಿಸಲು ಕಂಪನಿಗಳಿಗೆ ಅವಕಾಶ ನೀಡಬಾರದು. ಬದಲಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಇನ್ನು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಕ್ಯಾಡ್ಬರಿ ಬ್ರಾಂಡ್ ಅನ್ನು ಹೊಂದಿರುವ ಮೊಂಡೆಲೆಜ್, ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪನ್ನವು ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

"ಮೊಂಡೆಲೆಜ್ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ HACCP (ಹಜಾರ್ಡ್ ಅನಾಲಿಸಿಸ್ ಮತ್ತು ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ಸ್) ಅನ್ನು ಅನುಸರಿಸುತ್ತದೆ. ಇದು ವಿಶ್ವದ ಅತ್ಯಂತ ಸಮಗ್ರ ಆಹಾರ ಸುರಕ್ಷತಾ ವ್ಯವಸ್ಥೆಯಾಗಿದ್ದು, ನಮ್ಮ ಉತ್ಪನ್ನಗಳು ಯಾವುದೇ ಭೌತಿಕ, ರಾಸಾಯನಿಕ ಮತ್ತು ಸೂಕ್ಷ್ಮ ಜೀವವಿಜ್ಞಾನದ ಸಮಸ್ಯೆಗಳಿಂದ ಮುಕ್ತವಾಗಿವೆ ಎಂದು ಮೊಂಡೆಲೆಜ್ ಟ್ವೀಟ್ ಮಾಡಿದೆ.

"ಇತರ ಆಹಾರ ಉತ್ಪನ್ನಗಳಂತೆ ಚಾಕೊಲೇಟ್‌ಗೆ ವಿತರಣಾ ಸರಪಳಿ, ಚಿಲ್ಲರೆ ಪರಿಸರ ಮತ್ತು ಸಂಗ್ರಹಣೆಯಲ್ಲಿ ನಿರ್ದಿಷ್ಟ ಕಾಳಜಿ ಮತ್ತು ಗಮನದ ಅಗತ್ಯವಿದೆ. ನಾವು ಅದೇ ಬ್ಯಾಚ್‌ನ ಮಾದರಿಗಳನ್ನು ಮತ್ತು ಅದೇ ಸಮಯದಲ್ಲಿ ತಯಾರಿಸಲಾದ ಇತರ ಬ್ಯಾಚ್‌ಗಳನ್ನು ಪರೀಕ್ಷಿಸಿದ್ದೇವೆ ಮತ್ತು ಯಾವುದೇ ಸಮಸ್ಯೆ ಕಂಡುಬಂದಿಲ್ಲ" ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net