ಹಿಂಡಲಗಾ ಜೈಲಿಂದ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹಿಂದಿದೆ ಲಷ್ಕರ್-ಎ-ತೊಯ್ಬಾ ಉಗ್ರನ ನಂಟು!

Nitin Gadkari
Published on

ಬೆಳಗಾವಿ: ಈ ವರ್ಷದ ಆರಂಭದಲ್ಲಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನೀತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಸಚಿವರನ್ನು ಬೆದರಿಸಲು ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರನ ಪ್ರಚೋದನೆ ಇತ್ತೆಂದು ಹೇಳಲಾಗುತ್ತಿದೆ.

ಲಷ್ಕರ್-ಎ-ತೊಯ್ಬಾ ಸಂಘಟನೆ ಜತೆ ನಂಟು ಹೊಂದಿದ್ದ ಅಫ್ಸರ್ ಪಾಷಾನನ್ನು ನಿನ್ನೆ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮುಂಬೈಗೆ ರಸ್ತೆ ಮಾರ್ಗವಾಗಿ ಕರೆದೊಯ್ದಿದ್ದರು. ನಿನ್ನೆ ಇಡೀ ದಿನ ಅಪ್ಸರ್​ನನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ ಅಪ್ಸರ್ ಪಾಷಾನನ್ನು ಹಸ್ತಾಂತರಿಸಿದ್ದರು. ವಿಶೇಷ ವಿಮಾನದ ಮೂಲಕ ಅಪ್ಸರ್ ಪಾಷಾನನ್ನು ನಾಗಪುರ ಪೊಲೀಸರು ಕರೆದೊಯ್ದಿದ್ದಾರೆ.

ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆಗೆ ನಂಟು ಆರೋಪದಡಿ ಬಂಧಿತನಾಗಿದ್ದ ಅಪ್ಸರ್ ಪಾಷಾ, ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.

ಘಟನೆ ಹಿನ್ನೆಲೆ ಏನು?

ಜನವರಿ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ ನಂಬರ್​ಗೆ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿ ಎಂಬಾತ ಕರೆ ಮಾಡಿ ಜೀವ ಬೆದರಿಕೆ ಹಾಕಿ, 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ಅಪ್ಸರ್ ಪಾಷಾ ಪ್ರಚೋದನೆ

ಇದೀಗ ತನಿಖೆಯಲ್ಲಿ ಜಯೇಶ್​ ಪೂಜಾರಿಗೆ ಜೀವ ಬೆದರಿಕೆ ಹಾಕುವಂತೆ ಅಪ್ಸರ್ ಪಾಷಾ ಪ್ರಚೋದಿಸಿದ್ದಾನೆ. ಈ ಅಪ್ಸರ್​ಗೆ ಲಷ್ಕರ್ ಎ ತೋಯ್ಬಾ ಸಂಘಟನೆ ಜೊತೆ ನಂಟಿದೆ ಎಂಬ ಸಂಗತಿ ಬಯಲಾಗಿದೆ. ಈ ಸಂಗತಿಯನ್ನು ನಾಗಪುರ ಪೊಲೀಸರ ವಿಚಾರಣೆ ವೇಳೆ ಜಯೇಶ್​ ಪೂಜಾರಿ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಎನ್​ಐಎ ಮತ್ತು ನಾಗಪುರ ಪೊಲೀಸರು ಅಪ್ಸರ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಲ್ಲಿಗೆ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಿಂದೆ ಲಷ್ಕರ್ ಎ ತೊಯ್ಬಾ ಸಂಘಟನೆ ಉಗ್ರನ ಪ್ರಚೋದನೆ ಇರುವ ವಿಚಾರ ಹೊರಬಿದ್ದಿದೆ. ಅಂದಹಾಗೆ ಈ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಮತ್ತು ಶಾಕೀರ್ ಈ ಹಿಂದೆ ಪಾಷಾ ಜೊತೆಗೆ ಬೆಳಗಾವಿ ಜೈಲಿನಲ್ಲಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net