

ಗ್ವಾಲಿಯರ್: ಈತ ತಂದೆಯ ರೈಫಲ್ ಸ್ವಚ್ಛಗೊಳಿಸಲು ಹೋಗಿದ್ದೇ ಜೀವಕ್ಕೆ ಮುಳುವಾಗಿದೆ. ಅಪ್ಪನ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಅಕಸ್ಮಾತ್ ಆಗಿ ಟ್ರಿಗರ್ ಅದುಮಿದ ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇಂಥದ್ದೊಂದು ದುರಂತ ಮಧ್ಯಪ್ರದೇಶದಲ್ಲಿ ನಡೆದಿದೆ.
ಉದ್ಯಮಿ ಹಾಗೂ ಪತ್ರಕರ್ತನೂ ಆಗಿರುವ ಅಭಿಷೇಕ್ ಸಕ್ಸೇನಾ ಸಾವಿಗೀಡಾದ ಪುತ್ರ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಲಹರ್ ನಿವಾಸಿ ಆಗಿರುವ ಈತ ಈ ದುರಂತ ಸಾವಿಗೆ ಒಳಗಾಗಿದ್ದಾನೆ. ಗ್ವಾಲಿಯರ್ನ ತಟಿಪುರ ಪ್ರದೇಶದ ದರ್ಪಣ್ ಕಾಲನಿಯಲ್ಲಿ ತಂದೆಯ ಲೈಸೆನ್ಸ್ಡ್ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಲಹರ್ ನಿವಾಸಿ ಆಗಿರುವ ಇವರಿಗೆ ದರ್ಪಣ್ ಕಾಲನಿಯಲ್ಲಿ ಇನ್ನೊಂದು ಮನೆ ಇದ್ದು, ಕುಟುಂಬ ಎರಡನೇ ಮಹಡಿಯಲ್ಲಿ ವಾಸವಿದ್ದು, ಗ್ರೌಂಡ್ ಫ್ಲೋರ್ ಖಾಲಿ ಇತ್ತು. ಅಭಿಷೇಕ್ ತಂದೆಯ ರೈಫಲ್ನೊಂದಿಗೆ ಗ್ರೌಂಡ್ ಫ್ಲೋರ್ಗೆ ಬಂದಿದ್ದ.
ಅದಾಗಿ ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿದ್ದು, ಕುಟುಂಬಸ್ಥರು ಕೆಳಕ್ಕೆ ಓಡಿ ಬಂದಿದ್ದರು. ಆಗ ಗುಂಡಿನ ಗಾಯದೊಂದಿಗೆ ಅಭಿಷೇಕ್ ಸತ್ತು ಬಿದ್ದಿರುವುದು ಕಂಡುಬಂದಿದೆ. ಸ್ಥಳದಲ್ಲಿ ಕ್ಲೀನಿಂಗ್ ಆಯಿಲ್ ಮತ್ತಿತರ ವಸ್ತುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರೈಫಲ್ ಕ್ಲೀನ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಭಿಷೇಕ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ರೈಫಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.