ಲವ್​ ಬ್ರೇಕಪ್​ ಮಾಡಿಕೊಂಡ ಪ್ರೇಯಸಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಬೈಕ್​ ರೇಸರ್​

Bike Racer
Published on

ಚೆನ್ನೈ: ಮಾಜಿ ಗರ್ಲ್​ಫ್ರೆಂಡ್​ ತಿರುಚಿದ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಕೇರಳ ಮೂಲದ ಬೈಕ್​ ರೇಸರ್​ನನ್ನು ಬಂಧಿಸಲಾಗಿದೆ.

ಬಂಧಿತನನ್ನು ತ್ರಿಸ್ಸೂರ್​ ಮೂಲದ ಆಲ್ಡ್ರಿನ್ ಬಾಬು (24) ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. ಆರೋಪಿಯು ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದ. ಅಕ್ಟೋಬರ್ 30ರಂದು ಮಹಿಳೆ ನೀಡಿದ ದೂರಿನ ಮೇರೆಗೆ ಬಂಧನ ಮಾಡಲಾಗಿದೆ.

ಕೊಯಮತ್ತೂರು ಮೂಲದ ಸಂತ್ರಸ್ತ ಯುವತಿ ಮತ್ತು ಆಲ್ಡ್ರಿನ್ ಕೆಲವು ಸಮಯದಿಂದ ಸಂಬಂಧದಲ್ಲಿದ್ದರು. ಆದರೆ, ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಸಂಬಂಧವನ್ನು ಮುಂದುವರಿಸಲು ಆರೋಪಿ, ಮಹಿಳೆಯ ಬಳಿ ಮನವಿ ಮಾಡಿದ್ದಾನೆ. ಆದರೆ, ಅವಳು ಅದಕ್ಕೆ ಒಪ್ಪಲಿಲ್ಲ.

ಇದಾದ ನಂತರ ಆರೋಪಿಯು ಆಕೆಯ ತಿರುಚಿದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ. ತನ್ನ ಅಶ್ಲೀಲ ಚಿತ್ರಗಳನ್ನು ನೋಡಿದ ಯುವತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಳು. ಮಹಿಳೆ ಹೆಸರಿನಲ್ಲಿರುವ ನಕಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿತ್ತು.

ನಕಲಿ ಖಾತೆಯ ಐಪಿ ವಿಳಾಸವನ್ನು ಅನುಸರಿಸಿ ನಡೆಸಿದ ತನಿಖೆಯಲ್ಲಿ ಆರೋಪಿ ಆಲ್ಡ್ರಿನ್, ತನ್ನ ಮೊಬೈಲ್ ಫೋನ್‌ನಿಂದ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಲ್ಡ್ರಿನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net