More

    ಮ್ಯಾಕ್ಸಿ ದ್ವಿಶತಕ ಆಫ್ಘಾನ್​ಗೆ ಆಘಾತ​: ಸಂಕಷ್ಟ ಸಮಯದಲ್ಲಿ ಆಪತ್ಬಾಂಧವ ಆಟ, ಆಸಿಸ್​ ಸಮೀಸ್​ ಪ್ರವೇಶ ಖಚಿತ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ (ನ.07) ನಡೆದ ವಿಶ್ವಕಪ್​ ಟೂರ್ನಿಯ 39ನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿ, ಸೋಲಿನ ಸುಳಿಯಲ್ಲಿ ಸಿಲುಕ್ಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಆಪತ್ಬಾಂಧವನಾದ ಗ್ಲೇನ್​ ಮ್ಯಾಕ್ಸ್​ವೆಲ್ ( ಅಜೇಯ 201 ರನ್​ 128 ಎಸೆತ 21 ಬೌಂಡರಿ 10 ಸಿಕ್ಸರ್​) ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಆಸಿಸ್​ ಪಡೆ ಸಮೀಸ್​ ಪ್ರವೇಶವನ್ನು ಖಚಿತಪಡಿಸಿದರು.​

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಫ್ಘಾನ್​ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 291 ರನ್​ಗಳನ್ನು ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯ ಆಟವಾಡಿದ ಇಬ್ರಾಹಿಂ ಜದ್ರಾನ್ (129 ರನ್​, 143 ಎಸೆತ, 8 ಬೌಂಡರಿ, 3 ಸಿಕ್ಸರ್​) ಅಮೋಘ ಶತಕದೊಂದಿಗೆ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಉಳಿದಂತೆ ರಹಮತ್​ (30) ನಾಯಕ ಶಾಹಿದಿ (26), ಗುರ್ಬಜ್​ (21) ಮತ್ತು ಅಜ್ಮತುಲ್ಲಾ (22) ರನ್​ ಕಲೆ ಹಾಕಿದರೆ, ಕೊನೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಆಲ್​ರೌಂಡರ್​ ರಶೀದ್​ ಖಾನ್ 18 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್​ ನೆರವಿನೊಂದಿಗೆ 35 ರನ್​ ಕಲೆಹಾಕಿ ಅಜೇಯರಾಗಿ ಉಳಿದರು.

    ಆಸಿಸ್​ ಪರ ಹಾಜಲ್​ವುಡ್​ 2 ವಿಕೆಟ್​ ಕಬಳಿಸಿದರೆ, ಆ್ಯಡಂ ಜಂಪಾ ಮತ್ತು ಸ್ಟಾರ್ಕ್​ ತಲಾ ಒಂದು ವಿಕೆಟ್​ ಪಡೆದರು. ಉಳಿದ ಯಾವೊಬ್ಬ ಬೌಲರ್​ಗಳು ಕೂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

    ಆಫ್ಘಾನ್​ ನೀಡಿದ 291 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ್ದ ಆಸಿಸ್​ ಪಡೆ 46.5 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 293 ರನ್​ ಗಳಿಸುವ ಮೂಲಕ 3 ವಿಕೆಟ್​ಗಳ ಅಂತರದಿಂದ ವಿರೋಚಿತ ಗೆಲುವು ದಾಖಲಿಸಿತು.​

    ಗುರಿ ಬೆನ್ನತ್ತಿದ ಆಸಿಸ್​ ಪಡೆ ಟ್ರೆವಿಸ್​ ಹೆಡ್​ (0), ಮಿಚೆಲ್​ ಮಾರ್ಷ್​ (24) ಡೇವಿಡ್​ ವಾರ್ನರ್​ (18), ಜೋಶ್​ ಇಂಗ್ಲಿಸ್​ (0), ಮಾರ್ನಸ್​ ಲಬುಶೇನ್​ (14), ಮಾರ್ಕ್​ ಸ್ಟೋನಿಸ್​ (6) ಮತ್ತು ಮಿಚೆಲ್​ ಸ್ಟಾರ್ಕ್​ (3) ಕೇವಲ 91 ರನ್​ಗೆ ಪ್ರಮುಖ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಕ್ಷರಶಃ ಸೋಲಿನ ದವಡೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಗ್ಲೇನ್​ ಮ್ಯಾಕ್ಸ್​ವೆಲ್​ ಅಬ್ಬಿರಿಸಿ ಬೊಬ್ಬಿರಿದರು. ಮ್ಯಾಕ್ಸಿ ಮಾರುತಕ್ಕೆ ಆಫ್ಘಾನ್​ ಬೌಲರ್​​ಗಳು ತತ್ತರಿಸಿದರು. ಮ್ಯಾಕ್ಸಿ ತಾನು ಎದುರಿಸಿದ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್​ ನೆರವಿನೊಂದಿಗೆ 201 ರನ್​ ಗಳಿಸಿ ಅಜೇಯರಾಗಿ ಉಳಿದರು. ಗಮನಾರ್ಹ ಸಂಗತಿ ಏನೆಂದರೆ, ಮ್ಯಾಕ್ಸಿ ಆಸಿಸ್​ ಪಡೆಯ ಸಮೀಸ್​ ಪ್ರವೇಶವನ್ನು ಖಚಿತಪಡಿಸಿದರು. ಮ್ಯಾಕ್ಸಿ ಆಟಕ್ಕೆ ಸಾಥ್​ ನೀಡಿದ ನಾಯಕ ಪ್ಯಾಟ್​ ಕ್ಯುಮಿನ್ಸ್​ 68 ಎಸೆತಗಳಲ್ಲಿ ಕೇವಲ 12 ರನ್​ ಗಳಿಸುವ ಮೂಲಕ ತಾಳ್ಮೆಯ ಆಟದೊಂದಿಗೆ ವಿಕೆಟ್​ ಕಾಪಾಡಿಕೊಂಡರು. ಅವರು ಕೂಡ ಅಜೇಯರಾಗಿ ಉಳಿದರು.

    ಆಫ್ಘಾನ್​ ಪರ ನವೀನ್​ ಉಲ್​ ಹಕ್​, ಅಜ್ಮತುಲ್ಲಾ ಒಮರ್ಜಾಯ್ ಮತ್ತು ರಶೀದ್​ ಖಾನ್​ ತಲಾ ಎರಡೆರಡು ವಿಕೆಟ್​ ಕಬಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts