More

    ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ 1946 ಮತಗಟ್ಟೆ ಸ್ಥಾಪನೆ   8996 ಮತದಾನ ಸಿಬ್ಬಂದಿ ನಿಯೋಜನೆ 

    ದಾವಣಗೆರೆ:ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 1946 ಮತಗಟ್ಟೆ ಸ್ಥಾಪಿಸಲಾಗಿದೆ. ತಲಾ 2249 ಪಿಆರ್‌ಒ, ಎಪಿಆರ್‌ಒಗಳು, 4195 ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 8996 ಸಿಬ್ಬಂದಿ ನಿಯೋಜಿಸಲಾಗಿದೆ.
    ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಒಂದೊಂದು ಮತಗಟ್ಟೆಗೆ ಎರಡೆರಡು ಬ್ಯಾಲೆಟ್ ಯುನಿಟ್, ಒಂದು ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಬಳಸಲಾಗುತ್ತಿದೆ. 788 ಹೆಚ್ಚುವರಿ ಸೇರಿದಂತೆ ಒಟ್ಟು 4680 ಬ್ಯಾಲೆಟ್ ಯುನಿಟ್, 493 ಹೆಚ್ಚುವರಿ ಸೇರಿ 2439 ಕಂಟ್ರೋಲ್ ಯುನಿಟ್, ಕಾಯ್ದಿರಿಸಿದ 629 ಸೇರಿದಂತೆ 2575 ವಿವಿ ಪ್ಯಾಟ್ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    388 ಕ್ರಿಟಿಕಲ್,  ಐದು ವಲ್ನರಬಲ್ ಮತಗಟ್ಟೆಗಳಿವೆ. ಶೇ.60ರಷ್ಟು ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಮಾಡಲಾಗುತ್ತಿದೆ. ಒಟ್ಟು 188 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ. ಜಿಲ್ಲೆಯ 1693 ಮತಗಟ್ಟೆಗಳ ಸಿಬ್ಬಂದಿ ತೆರಳಲು 190 ಬಸ್, 127 ಮಿನಿ ಬಸ್, 29 ಜೀಪ್ ಹಾಗೂ ಅಂಗವಿಕಲರ ಮತಗಟ್ಟೆಗೆ ತೆರಳಲು ವಿಕಲಾಂಗರಿಗೆ ವಿಶೇಷವಾಗಿ 7 ಇನ್ನೋವಾ ಕಾರು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
    ಹರಪನಹಳ್ಳಿ ಕ್ಷೇತ್ರ ಒಳಗೊಂಡಂತೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,09,244 ಮತದಾರರಿದ್ದಾರೆ. ಈ ಪೈಕಿ 851990 ಪುರುಷರು, 857117 ಮಹಿಳೆಯರು, 137 ಮಂದಿ ತ್ರಿಲಿಂಗಿಗಳಿದ್ದಾರೆ. ಜಗಳೂರು ಕ್ಷೇತ್ರ- 198815, ಹರಿಹರ- 212397, ದಾವಣಗೆರೆ ಉತ್ತರ- 253156, ದಾವಣಗೆರೆ ದಕ್ಷಿಣ- 220997, ಮಾಯಕೊಂಡ- 195089, ಚನ್ನಗಿರಿ- 203870, ಹೊನ್ನಾಳಿ- 200947, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 223973 ಮತದಾರರಿದ್ದಾರೆ.
    ಒಟ್ಟು 563 ಸೇವಾ ಮತದಾರರಿದ್ದಾರೆ. ಇದರಲ್ಲಿ 551 ಪುರುಷರು, 12 ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಚುನವಣಾ ನಿರತ ಅಧಿಖಾರಿ-ಸಿಬ್ಬಂದಿ ಸೇರಿ 7873 ಮಂದಿಗೆ ಅವರು ಕಾರ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತದಾನ ಮಾಡಲು ಅವಕಾಶವಿದೆ. ಬೇರೆ ಜಿಲ್ಲೆಯ ಮತದಾರರಾಗಿರುವ ಒಟ್ಟು 1128 ಮತದಾರರಿಗೆ ಏ.30ರಂದು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿ, 527 ಮತದಾರರು ಮತ ಹಾಕಿದ್ದಾರೆ.
     ಜಿಲ್ಲೆಯಲ್ಲಿ ಏ. 25ರಿಂದ ಮೂರು ದಿನಗಳ ಕಾಲ ಮನೆ ಮನೆ ಮತದಾನ ನಡೆದಿದ್ದು, 85 ವರ್ಷ ಮೇಲ್ಪಟ್ಟ 12858 ಮತದಾರರ ಪೈಕಿ 1458 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1373 ಮಂದಿ (ಶೇ.94.17) ಮತ ಚಲಾಯಿಸಿದ್ದಾರೆ.  23221 ವಿಕಲಾಂಗರ ಪೈಕಿ 804 ಮಂದಿ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 787 ಜನರು (ಶೇ.97.88) ಹಕ್ಕು ಚಲಾವಣೆ ಮಾಡಿದ್ದಾರೆ ಎಂದು ವಿವರಿಸಿದರು.
    ವಿಶೇಷ ಬೂತ್‌ಗಳ ರಚನೆ
    ಜಿಲ್ಲೆಯಲ್ಲಿ 35 ಸಖಿ,  ತಲಾ 7 ಯುವ, ಸಾಂಪ್ರದಾಯಿಕ, ಧ್ಯೇಯ ಆಧಾರಿತ ಹಾಗೂ ವಿಕಲಾಂಗರ ಮತಗಟ್ಟೆಗಳು ಸೇರಿ 63 ವಿಶೇಷ ಬೂತ್‌ಗಳನ್ನು ರಚಿಸಲಾಗಿದೆ. ಬಲೂನ್ ಇತರೆ ಬಣ್ಣ ಲೇಪನ ಹಾಗೂ ಅಲಂಕಾರ ಮಾಡಲಾಗುತ್ತಿದೆ. ಕುಡಿವ ನೀರು, ವಿವಿಧೆಡೆ ಶಾಮಿಯಾನ ಹಾಕಲಾಗುತ್ತಿದೆ ಎಂದು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
    ಜಿಲ್ಲೆಯಿಂದ ಹೊರಗೆ ಕೆಲಸ ನಿಮಿತ್ತ ಹೋಗಿರುವ 45 ಸಾವಿರ ಜನರನ್ನು ಬಿಎಲ್‌ಒಗಳ ಮೂಲಕ ಸಂಪರ್ಕ ಮಾಡಲಾಗಿದ್ದು, ಮತದಾನಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ ಎಂದೂ ವಿವರಿಸಿದರು.
    1.70 ಕೋಟಿ ಮೌಲ್ಯದ ವಸ್ತುಗಳ ವಶ
    ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳಿಂದ ಇದುವರೆಗೆ 1,70,90,000 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಕೆಜಿ ಚಿನ್ನ, 2.92 ಲಕ್ಷ ರೂ. ಮೌಲ್ಯದ ಸೀರೆಗಳು, 602 ಲೀ. ಅಕ್ರಮ ಮದ್ಯ ಹಾಗೂ 7.28 ಲಕ್ಷ ರೂ.ನ ವಿವಿಧ ಸರಕನ್ನು ವಶಪಡಿಸಿಕೊಳ್ಳಲಾಗಿದೆ. ಶಾಂತಿಯುತ ಮತದಾನದ ಹಿನ್ನಲೆಯಲ್ಲಿ ಕೆಎಸ್ ಆರ್‌ಪಿ, ರ‌್ಯಾಪಿಡ್ ಫೋರ್ಸ್ ಸೇರಿ ಮತದಾನ ದಿನದಂದು 2750 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts