More

    ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಸೂಚನೆ

    ದಾವಣಗೆರೆ: ಲೋಕಸಭಾ ಚುನಾವಣಾ ಮತದಾನ ಮುಕ್ತಾಯವಾಗುವ 48 ಗಂಟೆ ಹಾಗೂ 24 ಗಂಟೆಗಳ ಅವಧಿಯಲ್ಲಿ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
     ಮತದಾನ ಮುಕ್ತಾಯವಾಗುವ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರ ಅಂತ್ಯವಾಗುವುದರಿಂದ ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಇರುವುದಿಲ್ಲ ಮತ್ತು ಗುಂಪು ಗುಂಪಾಗಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. 144 ಸೆಕ್ಷನ್ ಜಾರಿ ಇದ್ದು, 5 ಜನರಿಗಿಂತ ಹೆಚ್ಚು ಸೇರುವಂತಿಲ್ಲ, ಆದರೆ, ಇದು ಮನೆ ಮನೆ ಪ್ರಚಾರಕ್ಕೆ ಅನ್ವಯವಾಗದಿದ್ದರೂ ಬೇರೆಯವರಿಗೆ ತೊಂದರೆಯಾಗಬಾರದು ಎಂದು ಹೇಳಿದರು.
     ಎಲ್ಲ ತಂಡಗಳು ಸಕ್ರಿಯ ಕಾರ್ಯನಿರ್ವಹಣೆಗೆ ಸೂಚನೆ: ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಸರ್ವಲೆನ್ಸ್ ಟೀಮ್, ಚೆಕ್‌ಪೋಸ್ಟ್, ಅಬಕಾರಿ ಸೇರಿ ಎಲ್ಲ ತಂಡಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಬೇಕು. ಫ್ಲೈಯಿಂಗ್ ಸ್ಕ್ವಾಡ್ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಮತ್ತು ಮತದಾರರಿಗೆ ಆಮಿಷ, ಕೊಡುಗೆ, ಹಣ, ಮದ್ಯ ಹಂಚಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕೆಂದು ಸೂಚಿಸಿದರು.
     ಮತಗಟ್ಟೆಯಲ್ಲಿ ಬಿಎಲ್ಒ ಮತ್ತು ಪಿಆರ್‌ಒ ಬಳಿ ಮಾತ್ರ ಮೊಬೈಲ್ ಇರಬೇಕು, ಚುನಾವಣಾ ಏಜೆಂಟರ ಬಳಿ ಮೊಬೈಲ್ ಇರಬಾರದು. ಮತದಾನದ ವಿವರ ಸಂಗ್ರಹಿಸಲು ಕ್ಷಣಕ್ಷಣದ ವರದಿ ನೀಡಲು ಎಲ್ಲ ಕ್ಷೇತ್ರಗಳಲ್ಲಿ ತಂಡ ರಚನೆ ಮಾಡಿಕೊಂಡು ಅವರಿಗೆ ಸರಿಯಾದ ತರಬೇತಿ ನೀಡಲು ತಿಳಿಸಿದರು.
     ಚುನಾವಣಾ ವೀಕ್ಷಕಿ ಎಂ. ಲಕ್ಷ್ಮಿ ಮಾತನಾಡಿ ಮತಗಟ್ಟೆಯಲ್ಲಿ ನೀರಿನ ಸೌಕರ್ಯ ಇರಬೇಕು, ವಿಶೇಷಚೇತನರಿಗೆ ರ‌್ಯಾಂಪ್‌ಗಳು ಸರಿಯಾಗಿರಬೇಕು. ಏಜೆಂಟರ ಬಳಿ ಇರುವ ಮತದಾರರ ಪಟ್ಟಿ ಮತ್ತು ಚುನಾವಣಾ ಸಿಬ್ಬಂದಿ ಬಳಿ ಇರುವ ಪ್ರತಿ ಒಂದೇ ಇರುವಂತೆ ನೋಡಿಕೊಳ್ಳಬೇಕು. ಸಂವಹನಕ್ಕಾಗಿ ಎಲ್ಲ ಸಂಪರ್ಕಾಧಿಕಾರಿಗಳ ಮೊಬೈಲ್ ಸಂಖ್ಯೆ ಮತಗಟ್ಟೆ ಅಧಿಕಾರಿಯ ಬಳಿ ಇರುವಂತೆ ಮತ್ತು ಯಾವುದೇ ಘಟನೆಗಳು ನಡೆದಾಗ ತಕ್ಷಣ ಪೊಲೀಸ್ ಸಿಬ್ಬಂದಿ ತಲುಪುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
      ವೆಚ್ಚ ವೀಕ್ಷಕಿ ಪ್ರತಿಭಾ ಸಿಂಗ್ ಮಾತನಾಡಿ, 48 ಗಂಟೆಗಳ ಅವಧಿಯಲ್ಲಿ ಎಫ್‌ಎಸ್‌ಟಿ, ಎಸ್.ಎಸ್.ಟಿ.ಗಳ ಪಾತ್ರ ಬಹಳ ಮುಖ್ಯವಾಗಿದ್ದು, ವಾರ್ ರೂಂಗಳಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ತೀವ್ರ ನಿಗಾ ವಹಿಸಬೇಕೆಂದು ತಿಳಿಸಿದರು.
     ಸಾಮಾನ್ಯ ಚುನಾವಣಾ ವೀಕ್ಷಕಿ ಎಂ.ಲಕ್ಷ್ಮೀ ಹಾಗೂ ವೆಚ್ಚ ವೀಕ್ಷಕಿ ಪ್ರತಿಭಾಸಿಂಗ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.
     —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts