More

  ಕೊನೇಲಿ ಕೊಹ್ಲಿ​ ಬ್ಯಾಟಿಂಗ್​​…ವಿರಾಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರಾ ಗಂಭೀರ್? ತೊಂದರೆಯಾಗ್ತಿತ್ತು ಅಂದಿದ್ದೇಕೆ ಗೌತಿ

  ನವದೆಹಲಿ: ಹುಟ್ಟುಹಬ್ಬದ ದಿನ ವಿರಾಟ್​ ಕೊಹ್ಲಿ 49ನೇ ಶತಕ ಬಾರಿಸಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ದಾಖಲೆ ಸರಿಗಟ್ಟುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದನ್ನು ಇಡೀ ಕ್ರೀಡಾ ಜಗತ್ತೇ ಕೊಂಡಾಡುತಿದೆ. ಅಷ್ಟೇ ಯಾಕೆ ಸ್ವತಃ ಸಚಿನ್​ ಅವರೇ ಕೊಹ್ಲಿಯನ್ನು ಮೆಚ್ಚಿದ್ದಾರೆ. ಸಂಭ್ರಮಿಸಬೇಕಾದ ಈ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​, ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರೆ ತಪ್ಪಾಗಲಾರದು.

  ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ (ನ.5) ನಡೆದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ಕೊನೆಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು ಎಂದು ಗಂಭೀರ್​ ಹೇಳಿದ್ದಾರೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ​ ಮತ್ತು ಶುಭಮನ್ ಗಿಲ್​ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಇಬ್ಬರು ಆದಷ್ಟು ಬೇಗ ಕ್ರೀಸ್​ನಿಂದ ನಿರ್ಗಮಿಸಿದರು. ಬಳಿಕ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ಉತ್ತಮ ಜತೆಯಾಟವಾಡಿ, ಇನ್ನಿಂಗ್ಸ್​ ಕಟ್ಟಿದರು.

  ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ ಮಾಡಿದ ಕೊಹ್ಲಿ ನಂತರದಲ್ಲಿ ತಾಳ್ಮೆ ಮತ್ತು ದೃಢನಿರ್ಣಯದೊಂದಿಗೆ ಬ್ಯಾಟ್​ ಬೀಸಿದರು. ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ 67 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದರು. ಅಲ್ಲದೆ, 49ನೇ ಓವರ್​ನಲ್ಲಿ ಏಕದಿನ ದಿನ ಕ್ರಿಕೆಟ್​ನಲ್ಲಿ 49ನೇ ಶತಕ ಸಿಡಿಸಿ ಸಂಭ್ರಮಿಸಿದರು.

  ಆರಂಭದಲ್ಲಿ ಬ್ಯಾಟ್​ ಬೀಸುವ ವೇಗಕ್ಕೆ ಚುರುಕು ನೀಡಿದ್ದ ಕೊಹ್ಲಿ, ಕೊನೆಯಲ್ಲಿ ತಾಳ್ಮೆಯ ಆಟದೊಂದಿಗೆ ನಿಧಾನಗತಿಯ ಬ್ಯಾಟ್​ ಬೀಸಿದರು. 101 ರನ್​ ಗಳಿಸಲು 119 ಎಸೆತಗಳನ್ನು ತೆಗೆದುಕೊಂಡರು. ಶತಕದ ದಾಖಲೆಗಾಗಿ ತಾಳ್ಮೆಯ ಆಟಕ್ಕೆ ಕೊಹ್ಲಿ ಮೊರೆ ಹೋದರು. ಅಂತಿಮವಾಗಿ ಟೀಮ್​ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 326 ರನ್​ ಕಲೆ ಹಾಕಿತು.

  ಈ ಪಂದ್ಯದಲ್ಲಿ ಭಾರತ 243 ರನ್​ಗಳ ಅಂತರಿಂದ ಭಾರೀ ಜಯ ದಾಖಲಿಸಿತು. ಈ ಬಗ್ಗೆ ಸ್ಪೋರ್ಟ್​ಕೀಡಾ ಮಾಧ್ಯಮದೊಂದಿಗೆ ಮಾತನಾಡಿದ ಗೌತಮ್​ ಗಂಭೀರ್​, ಕೊನೆಯವರೆಗೂ ಉಳಿಯುವುದು ಕೊಹ್ಲಿಗೆ ತುಂಬಾ ಮುಖ್ಯವಾಗಿತ್ತು. ಒಂದು ವೇಳೆ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಆಗಿದ್ದರೆ ಕೊನೆಯಲ್ಲಿ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್​ ಭಾರತಕ್ಕೆ ನೋವು ತರುವ ಸಾಧ್ಯತೆ ಇತ್ತು ಎಂದು ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

  ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವುದು ತುಂಬಾ ಮುಖ್ಯವಾಗಿತ್ತು ಮತ್ತು ಕೊನೆಯ 5 ರಿಂದ 6 ಓವರ್‌ಗಳಲ್ಲಿ ಕೊಹ್ಲಿ, ಸ್ವಲ್ಪ ನಿಧಾನಗೊಳಿಸಿದರು. ಬಹುಶಃ ಅವರು ಶತಕದ ಸಮೀಪದಲ್ಲಿ ಇದ್ದಿದ್ದು ಇದಕ್ಕೆ ಕಾರಣವಾಗಿದೆ. ಆದರೆ, ಬೋರ್ಡ್​ನಲ್ಲಿ ಈಗಾಗಲೇ ಸಾಕಷ್ಟು ರನ್‌ಗಳಿತ್ತು ಎಂದು ನಾನು ನಂಬುತ್ತೇನೆ. ಆದರೆ, ಬ್ಯಾಟಿಂಗ್​ ಪಿಚ್‌ ಆಗಿದ್ದರೆ ಭಾರತಕ್ಕೆ ನಿಜಕ್ಕೂ ತೊಂದರೆಯಾಗುತ್ತಿತ್ತು ಎಂದು ಗಂಭೀರ್ ಹೇಳಿದ್ದಾರೆ.

  ರವೀಂದ್ರ ಜಡೇಜಾ ಅವರು ಸಾಕಷ್ಟು ಯಶಸ್ಸನ್ನು ಸಾಧಿಸಿದ ಸ್ಪಿನ್​ ಟ್ರ್ಯಾಕ್‌ನಲ್ಲಿ ಕೇಶವ್ ಮಹಾರಾಜ್ ಅವರ ಸ್ಪಿನ್​ ಬೆದರಿಕೆಯನ್ನು ಬಹಳ ಬುದ್ಧಿವಂತಿಕೆಯಿಂದ ಎದುರಿಸಿದ್ದಕ್ಕಾಗಿ ಗಂಭೀರ್ ಅವರು ಕೊಹ್ಲಿ ಮತ್ತು ಶ್ರೇಯಸ್ ಅವರನ್ನು ಹೊಗಳಿದರು.

  ಶ್ರೇಯಸ್ ಅಯ್ಯರ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ಮೇಲಿದ್ದ ಒತ್ತಡವನ್ನು ಸುಲಭವಾಗಿ ನಿಭಾಯಸಿದ ರೀತಿಗೆ ನೀವು ಶ್ರೇಯಸ್ ಅವರಿಗೆ ಕ್ರೆಡಿಟ್ ನೀಡಬೇಕಾಗಿದೆ. ಹೊಸ ಚೆಂಡಿನೊಂದಿಗೆ ಬ್ಯಾಟಿಂಗ್ ಮಾಡಲು ಉತ್ತಮ ಸಮಯವಾದ್ದರಿಂದ ಇಬ್ಬರೂ ಮಧ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದರು. ಇಬ್ಬರು ಕೇಶವ್ ಮಹಾರಾಜ್ ಅವರನ್ನು ಸಮರ್ಥವಾಗಿ ಎದುರಿಸಿದರು ಎಂದು ಗಂಭೀರ್​ ಪ್ರಶಂಸಿಸಿದರು.

  ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾನುವಾರದ ಬಲಿಷ್ಠರ ಕಾದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ನಾಯಕ ರೋಹಿತ್ ಶರ್ಮ ಒದಗಿಸಿದ ಬಿರುಸಿನ ಆರಂಭ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ (77 ರನ್, 87 ಎಸೆತ, 7 ಬೌಂಡರಿ, 2 ಸಿಕ್ಸರ್) ಜೋಡಿಯ ಉಪಯುಕ್ತ ಜತೆಯಾಟದಿಂದ 5 ವಿಕೆಟ್‌ಗೆ 326 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಜಡೇಜಾ ಸ್ಪಿನ್ ದಾಳಿಗೆ ನಲುಗಿ ಚೇಸಿಂಗ್‌ನಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದ ದಕ್ಷಿಣ ಆಫ್ರಿಕಾ 27.1 ಓವರ್‌ಗಳಲ್ಲಿ ಕೇವಲ 83 ರನ್‌ಗಳಿಗೆ ಸರ್ವಪತನ ಕಂಡಿತು. ಈ ಪಂದ್ಯಕ್ಕೆ ಮೊದಲೇ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದ ಟೆಂಬಾ ಬವುಮಾ ಪಡೆ, ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. (ಏಜೆನ್ಸೀಸ್​)

  ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿಗೆ ಸಚಿನ್ ಶುಭಾಶಯ: ಏನಂದ್ರು ಕ್ರಿಕೆಟ್ ದೇವರು?

  ICCWC 2023, IND VS SA: ಸತತ 8ನೇ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ!

  ದಕ್ಷಿಣ ಆಫ್ರಿಕಾ ಎದುರು ಶತಕ ಸಿಡಿಸಿ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ: ಯುವಿ ಸಾಧನೆ ಹಿಂದಿಕ್ಕಿದ ರವೀಂದ್ರ ಜಡೇಜಾ

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts