ICCWC 2023, IND VS SA: ಸತತ 8ನೇ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ!

Untitled design (6)
Published on

ಕೋಲ್ಕತಾ: ಏಕದಿನ ವಿಶ್ವಕಪ್ 2023ರ ಪ್ರತಿಯೊಂದು ಪಂದ್ಯಗಳು ಇದೀಗ ಸಿಕ್ಕಾಪಟ್ಟೆ ರೋಚಕವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಕ್ರಿಕೆಟ್​ ಅಭಿಮಾನಿಗಳನ್ನು ನಿರಾಸೆಗೊಳಿಸದೆ ಸತತ ಗೆಲುವಿನ ಮುಖೇನ ಎದುರಾಳಿ ತಂಡಗಳನ್ನು ಹಿಂದಿಕ್ಕಿ ಸದ್ಯ ಟ್ರೋಫಿಯತ್ತ ದಾಪುಗಾಲು ಇಡುತ್ತಿರುವುದು ಭಾರೀ ಸಂತಸ ತಂದಿದೆ. ಇಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡುವೆ ನಡೆದ ಪಂದ್ಯದಲ್ಲಿ ಸತತ 8ನೇ ಬಾರಿಗೆ ಭಾರತ ಜಯಭೇರಿಯಾಗಿದೆ.

ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್ ಇಂಡಿಯಾ, 327 ರನ್‌ಗಳ ಬೃಹತ್​ ಗುರಿ ನೀಡಿತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಸೌತ್​ ಆಫ್ರಿಕಾ, ಹಂತ ಹಂತವಾಗಿ ವಿಫಲಗೊಂಡಿತು. ಬೌಲಿಂಗ್‌ನಲ್ಲೂ ಆಕ್ರಮಣಕಾರಿ ದಾಳಿ ನಡೆಸಿದ ಭಾರತ ಎದುರಾಳಿ ತಂಡಕ್ಕೆ ಗುರಿಯನ್ನು ತಲುಪಲು ಬಿಡದೆ ಕೇವಲ 83 ರನ್​ಗಳಿಗೆ ಆಲ್​ಔಟ್​ ಮಾಡಿತು. ಈ ಮೂಲಕ 243 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿತು.

ಬ್ಯಾಟಿಂಗ್​ನಲ್ಲಿ ಎಂದಿನಂತೆ ಅಬ್ಬರಿಸಿದ ರನ್​ ಮಷಿನ್​ ವಿರಾಟ್​ ಕೊಹ್ಲಿ ಅಜೇಯ 101 ರನ್​ ದಾಖಲಿಸುವ ಮುಖೇನ ಮತ್ತೊಂದು ಶತಕವನ್ನು ಸಿಡಿಸಿದರು. 77 ರನ್​ಗಳನ್ನು ಗಳಿಸಿದ ಶ್ರೇಯಸ್​ ಐಯ್ಯರ್​ ವಿರಾಟ್​ಗೆ ಸಾಥ್​ ನೀಡಿ ಪೆವಿಲಿಯನ್​ ಸೇರಿದರು. ಬೌಲಿಂಗ್​ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಸ್ಪಿನ್​ ಬೌಲರ್​ ರವೀಂದ್ರ ಜಡೇಜಾ, 9 ಓವರ್‌ಗಳಲ್ಲಿ 33 ರನ್‌ ನೀಡಿ 5 ವಿಕೆಟ್‌ ಪಡೆದರು. ಅವರೊಂದಿಗೆ ಕೈಜೋಡಿಸಿದ ಮೊಹಮ್ಮದ್‌ ಶಮಿ ಮತ್ತು ಕುಲ್ದೀಪ್‌ ಯಾದವ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

ಇನ್ನು ವೇಗಿ ಮೊಹಮ್ಮದ್‌ ಸಿರಾಜ್‌ ಕೂಡ ಒಂದು ವಿಕೆಟ್‌ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಈ ಮೂಲಕ ಕ್ರಿಕೆಟ್​ ಅಖಾಡದಲ್ಲಿ ಅದ್ದೂರಿ ಗೆಲುವು ದಾಖಲಿಸಿದ ಭಾರತ, ಇದೀಗ ಸೆಮಿಫೈನಲ್​ನತ್ತ ಕಣ್ಣೀಟ್ಟಿದೆ. ಮುಂದಿನ ಲೆಕ್ಕಾಚಾರಗಳು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net