ಸಿಎಂ ಸ್ಥಾನ ಕುರಿತು ಹೇಳಿಕೆ ನೀಡದಂತೆ ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

Siddaramaiah
Published on

ಮೈಸೂರು: ‘ಮುಖ್ಯಮಂತ್ರಿ ಸ್ಥಾನ’ದ ಕುರಿತು ಇನ್ನು ಮುಂದೆ ಯಾರೂ ಹೇಳಿಕೆ ನೀಡದಂತೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಿಗೆ ನಿರ್ದೇಶನ ನೀಡಲಾಗಿದೆ. ಉಪಾಹಾರ ಕೂಟದಲ್ಲಿಯೂ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದರಿಂದ ಗೊಂದಲ ಉಂಟಾಗಿತ್ತು. ಆದ್ದರಿಂದ ಉಪಾಹಾರ ಕೂಟದಲ್ಲಿ ನಾನೇ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿ, ಇನ್ನು ಮುಂದೆ ಯಾರೂ ಈ ಕುರಿತು ಮಾತನಾಡಬೇಡಿ. ಕ್ಷೇತ್ರ, ಇಲಾಖೆಯ ಅಭಿವೃದ್ಧಿ ಕುರಿತು ಮಾತ್ರ ಮಾತನಾಡಬೇಕು. ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದೇನೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ, ಜೆಡಿಎಸ್‌ನ 17 ಶಾಸಕರ ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ವ್ಯಂಗ್ಯದಿಂದ ಕೂಡಿದೆ. ಖುದ್ದು ಡಿ.ಕೆ.ಶಿವಕುಮಾರ್ ಅವರೇ ಅದನ್ನು ವ್ಯಂಗ್ಯವೆಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೂ ವ್ಯಂಗ್ಯವಾಗಿ ಹೇಳುವುದು ಬರುತ್ತದೆನ್ನುವುದೇ ನಮಗೆ ಖುಷಿ. ನೈತಿಕತೆ ಇದ್ದರೆ ಮೊದಲು ಅವರು ಎನ್‌ಡಿಎ ಬಿಟ್ಟು ಹೊರಬರಲಿ ಎಂದು ಟಾಂಗ್ ಕೊಟ್ಟರು.
ತಾವೇ ಸರ್ಕಾರ ರಚಿಸುವುದಾಗಿ ಬಿಜೆಪಿ, ಜೆಡಿಎಸ್ ಭಾವಿಸಿದ್ದವು. ಆದರೆ ಅದು ಸಾಧ್ಯವಾಗದಿದ್ದರಿಂದ ಹತಾಶರಾಗಿ ಮುಖ್ಯಮಂತ್ರಿ ಕುರ್ಚಿ ಇವತ್ತು, ನಾಳೆ ಬೀಳುತ್ತದೆಂದು ಪದೇ ಪದೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net