ಇಡೀ ಜಗತ್ತಿಗೆ ಕರೊನಾ ಹಬ್ಬಿಸಿ ತನ್ನ ದೇಶದೊಳಗೆ ಮೊದಲ ಬಾರಿಗೆ ಮಹತ್ತರ ಸಾಧನೆಗೈದ ಚೀನಾ ಸರ್ಕಾರ!

China Corona
Published on

ಬೀಜಿಂಗ್​: ಕರೊನಾ ವೈರಸ್​ ವಿಚಾರದಲ್ಲಿ ಚೀನಾ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಚೀನಾ ಜನವರಿಯಿಂದಲೂ ನಿರಂತರ ಕರೊನಾ ವರದಿ ನೀಡುತ್ತಾ ಬಂದಿದೆ. ಪ್ರತಿನಿತ್ಯ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇತ್ತು. ಆದರೆ, ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬುದು ತಿಳಿದುಬಂದಿದೆ.

ಕರೊನಾ ವಿರುದ್ಧ ಹೋರಾಟದಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ್ದರ ಬಗ್ಗೆ ಕಮ್ಯೂನಿಷ್ಟ್​ ಪಾರ್ಟಿಯ ನಾಯಕರು ನಿನ್ನೆಯಷ್ಟೇ ಆಚರಣೆ ಮಾಡಿದ್ದರು. ಇದರ ಬೆನ್ನಲ್ಲೇ ಶನಿವಾರ ಒಂದೇ ಒಂದು ಪ್ರಕರಣಗಳು ರಾಷ್ಟ್ರದಲ್ಲಿ ವರದಿಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

ಅಂದಹಾಗೆ ಕರೊನಾ ಹುಟ್ಟಿದ್ದು ಇದೇ ಚೀನಾದಲ್ಲಿ. ಇಲ್ಲಿನ ಹುಬೇ ಪ್ರಾಂತ್ಯದ ವುಹಾನ್ ನಗರದ ಜೀವಂತ ಪ್ರಾಣಿ ಮಾರುಕಟ್ಟೆಯೇ ಕೋವಿಡ್​-19 ತವರು ಎಂದು ಹೇಳಲಾಗಿದೆ. ಕಳೆದ ವರ್ಷದ ಡಿಸೆಂಬರ್​ನಲ್ಲಿ ಕರೊನಾ ಬೆಳಕಿಗೆ ಬಂತು. ಚೀನಾದಲ್ಲಿ ಫೆಬ್ರವರಿ ತಿಂಗಳಲ್ಲಿ ಕರೊನಾ ಉಪಟಳ ಹೆಚ್ಚಾಗಿತ್ತು. ಇದೀಗ ವೈರಸ್​ ಅನ್ನು ಸರ್ಕಾರ ಸಂಪೂರ್ಣ ಹತೋಟಿಗೆ ತಂದಿದೆ.

140 ಕೋಟಿ ಜನಸಂಖ್ಯೆ ಇರುವ ಚೀನಾದಲ್ಲಿ ಕರೊನಾದಿಂದ 4,634 ಮಂದಿ ಅಸುನೀಗಿದ್ದಾರೆ. ಚೀನಾ ಕರೊನಾ ತವರೇ ಆದರೂ ಇತರೆ ದೇಶಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆ ಇದೆ. ಅಲ್ಲದೆ, ಅಂಕಿ-ಅಂಶದಲ್ಲಿ ತಪ್ಪು ಮಾಹಿತಿ ನೀಡಿದ ಎಂಬ ಆರೋಪವೂ ಇದೆ. ಈಗಾಗಲೇ ಕರೊನಾ ಅಮೆರಿಕದಲ್ಲಿ ಕರೊನಾ ಸಾವಿನ ರಣಕೇಕೆ ಹಾಕಿದ್ದು, ಚೀನಾ ವಿಚಾರದಲ್ಲಿ ಹಲ್ಲು ಮಸೆಯುತ್ತಿರುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಚೀನಾ ವಿರುದ್ಧ ನಿರಂತರ ಕಿಡಿಕಾರುತ್ತಲೇ ಬರುತ್ತಿದ್ದಾರೆ. ಅಲ್ಲದೆ, ಚೀನಾದ ಅನೇಕ ನಡೆಗಳು ಬಗ್ಗೆ ಅನುಮಾನ ವ್ಯಕ್ತಪಡಿಸಿ, ನಿರಂತರ ಪ್ರಶ್ನಿಸುತ್ತಿದೆ.

ಚೀನಾದಲ್ಲೂ ಸಹ ವೈರಸ್​ ತಹಬದಿಗೆ ತರಲು ಲಾಕ್​ಡೌನ್​ನಂತಹ ಹಲವು ಉಪಕ್ರಮಗಳನ್ನು ಅನುಸರಿಸಲಾಯಿತು. ಇದೀಗ ಎಲ್ಲವೂ ತೆರವುಗೊಂಡಿದ್ದು, ಜನಜೀವನ ತಹಬದಿಗೆ ಬಂದಿದೆಯಾದರೂ, ಚೀನಾ ಕೆಲ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net