

Eknath Shinde: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಯವರ ಅಧಿಕೃತ ಎಕ್ಸ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಖಾತೆಯಲ್ಲಿ ಪಾಕಿಸ್ತಾನ, ಟರ್ಕಿ ಧ್ವಜಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಭಾನುವಾರ (ಸೆ.21) ವರದಿಯಾಗಿದೆ.
ಇಂದಿನ ಇಂಡಿಯಾ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಏಷ್ಯಾ ಕಪ್ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿದೆ. ಹ್ಯಾಕರ್‌ಗಳು ಎರಡೂ ದೇಶಗಳಿಗೆ ಸಂಬಂಧಿಸಿದ ಧ್ವಜದ ಚಿಹ್ನೆಗಳನ್ನು ಒಳಗೊಂಡ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಏಕನಾಥ್ ಶಿಂಧೆ ಆಪ್ತ ಅಧಿಕಾರಿಯೊಬ್ಬರು, ಅಧಿಕೃತ ಖಾತೆಯಲ್ಲಿ ಬೇರೆ ದೇಶದ ಧ್ವಜ ಕಾಣಿಸಿಕೊಂಡ ತಕ್ಷಣ ಚೆಕ್ ಮಾಡಿದ್ದು, ಖಾತೆ ಹ್ಯಾಕ್ ಆಗಿತ್ತು. ನಾವು ತಕ್ಷಣ ಸೈಬರ್ ಅಪರಾಧ ಘಟಕಕ್ಕೆ ಮಾಹಿತಿ ನೀಡಿದೆವು. ನಮ್ಮ ಸಾಮಾಜಿಕ ಮಾಧ್ಯಮ ತಂಡವು 30 ರಿಂದ 45 ನಿಮಿಷಗಳಲ್ಲಿ ಹ್ಯಾಕರ್ಗಳಿಂದ ಖಾತೆಯ ನಿಯಂತ್ರಣವನ್ನು ಮರಳಿ ಪಡೆದಿದೆ ಎಂದು ಹೇಳಿದ್ದಾರೆ.
ಇನ್ನು ಡಿಸಿಎಂ ಖಾತೆಗೆ ಹ್ಯಾಕ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪ್ರತಿಕ್ರಿಯಿಸಿದ್ದು, ಇಂದು ರಾಜ್ಯದ ಡಿಸಿಎಂ ಏಕನಾಥ್ ಶಿಂಧೆ ಅವರ X ಖಾತೆ ಹ್ಯಾಕ್ ಆಗಿರುವ ಆಘಾತಕರ ಘಟನೆ ನಡೆದಿದೆ. ರಾಜ್ಯದಲ್ಲೇ ಡಿಸಿಎಂ ಖಾತೆಯೇ ಸುರಕ್ಷಿತವಾಗಿಲ್ಲ ಅಂದ್ರೆ ಜನಸಾಮಾನ್ಯರ ಸೈಬರ್ ಸುರಕ್ಷತೆ ಏನು ಎಂದು ಜನರಲ್-ಝೆಡ್ ಯುವ ಸಮೂಹದಲ್ಲಿ ಈ ಪ್ರಶ್ನೆ ಕಾಡುತ್ತಿರುತ್ತದೆ ಎಂದಿದ್ದಾರೆ.
ಡಿಸಿಎಂ ಖಾತೆ ಹ್ಯಾಕ್ ಆಗುವುದು ರಾಜ್ಯದ ಗೃಹ ಇಲಾಖೆಯ ಸುರಕ್ಷತೆಯ ಮೇಲೆಯೇ ದೊಡ್ಡ ಪ್ರಶ್ನೆಗಳನ್ನು ಎತ್ತಿದೆ. ಇದಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ನಾಗರಿಕರ ಸೈಬರ್ ರಕ್ಷಣೆಗಾಗಿ ಸರ್ಕಾರದಿಂದ ಏನು ಖಾತರಿ ಇದೆ: ಇದಕ್ಕೆ ಗೃಹ ಇಲಾಖೆ ಸ್ಪಷ್ಟ ಉತ್ತರ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)