ಗುಜರಾತ್​ನ ಕಚ್​ನಲ್ಲಿ ಲಘು ಭೂಕಂಪನ; ಎರಡು ಬಾರಿ ಕಂಪಿಸಿದ ಭೂಮಿ; ಮೇಘಾಲಯದಲ್ಲೂ ಕಂಪನ| Earthquake

Untitled design (67)
Published on

Earthquake: ಗುಜರಾತ್​ನ ಕಚ್​ ಜಿಲ್ಲೆಯಲ್ಲಿ ಭಾನುವಾರ (ಸೆ. 21) ಲಘು ಭೂಕಂಪ ಸಂಭವಿಸಿದ್ದು, ಎರಡು ಭಾರಿ ಭೂಮಿ ಕಂಪಿಸಿದೆ. ಹಾಗೆಯೇ ಮೇಘಾಲಯದಲ್ಲೂ ಭೂಕಂಪನ ಸಂಭವಿಸಿದ್ದು, ಯಾವುದೇ ಸಾವು, ನೋವು ಹಾಗೂ ಆಸ್ತಿಪಾಸ್ತಿಯ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಸೀಸ್ಮೋಲಾಜಿಕಲ್ ರಿಸರ್ಚ್ (ಐಎಸ್ಆರ್) ಪ್ರಕಾರ, ಮೊದಲ ಭೂಕಂಪನವು ಬೆಳಗ್ಗೆ 6.41ಕ್ಕೆ ಸಂಭವಿಸಿದ್ದು, ತೀವ್ರತೆ 2.6ರಷ್ಟು ಹೊಂದಿದೆ. ಈ ಕಂಪನದ ಕೇಂದ್ರ ಬಿಂದು ಧೋಲಾವಿರದಿಂದ ಪೂರ್ವ ಆಗ್ನೇಯಕ್ಕೆ 24 ಕಿಮೀ ದೂರದಲ್ಲಿದೆ ಎಂದು ಹೇಳಿದೆ.

ಮಧ್ಯಾಹ್ನ 12.41ರ ಸುಮಾರಿಗೆ ಎರಡನೇ ಬಾರಿ 3.1ರಷ್ಟು ತೀವ್ರತೆಯಲ್ಲಿ ಪ್ರಬಲ ಕಂಪನ ಸಂಭವಿಸಿದೆ. ಈ ಕಂಪನದ ಕೇಂದ್ರ ಬಿಂದು ಭಚೌದಿಂದ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿದೆ ಎಂದು ತಿಳಿಸಿದೆ. ಎರಡು ಬಾರಿಯ ಕಂಪನದಿಂದ ಯಾವುದೇ ಸಾವು-ನೋವು ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಚ್ ಪ್ರದೇಶವೂ ಅತ್ಯಂತ ಅಪಾಯಕಾರಿ ಭೂಕಂಪನ ವಲಯದಲ್ಲಿದೆ, ಈ ಪ್ರದೇಶದಲ್ಲಿ ಸಣ್ಣಪುಟ್ಟ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ. ಹಾಗೆಯೇ ತೀವ್ರವಾದ ಭೂಕಂಪನ ಘಟನೆಗಳ ಇತಿಹಾಸವನ್ನು ಹೊಂದಿದೆ. ಅವುಗಳಲ್ಲಿ ಅತ್ಯಂತ ವಿನಾಶಕಾರಿ ಎಂದರೆ 2001 ರ ಭುಜ್ ಭೂಕಂಪ. ಈ ವೇಳೆ 13,800 ಮಂದಿ ಸಾವನ್ನಪ್ಪಿದರು. 1.67 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡರು. ಪಟ್ಟಣ, ಹಳ್ಳಿಗಳಲ್ಲಿ ಭಾರಿ ಆಸ್ತಿಯನ್ನು ನಾಶ ಮಾಡಿತು.

ಮೇಘಾಲಯದಲ್ಲಿ ಭೂಕಂಪ

ಬಾಂಗ್ಲಾದೇಶದಲ್ಲಿ ಭಾನುವಾರ 4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಮೇಘಾಲಯದಲ್ಲಿಯೂ ಭೂಕಂಪನ ಸಂಭವಿಸಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 11.49 ಸುಮಾರಿಗೆ ಬಾಂಗ್ಲಾದೇಶದ ಗಡಿಯ ಬಳಿ ಭೂಕಂಪ ಸಂಭವಿಸಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net