ಅಮೆರಿಕಾದ ಹೆಚ್ಚುವರಿ ಸುಂಕ, ವೀಸಾ ಶುಲ್ಕದಿಂದ ದೇಶ ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲ; ಅಖಿಲೇಶ್ ಯಾದವ್ ವಾಗ್ದಾಳಿ| Akhilesh Yadav

Untitled design (68)
Published on

Akhilesh Yadav: ದೇಶದಲ್ಲಿ ಅಧಿಕಾರದಲ್ಲಿರುವ ಕೇಂದ್ರ ಬಿಜೆಪಿ ಸರ್ಕಾರ ಅಮೆರಿಕಾದ ಹೆಚ್ಚುವರಿ ಸುಂಕ, ಹೆಚ್​1-ಬಿ ವೀಸಾ ಶುಲ್ಕದಿಂದ ದೇಶವನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಭಾನುವಾರ(ಸೆ. 21) ಉತ್ತರ ಪ್ರದೇಶ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಲಖನೌದಲ್ಲಿ ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ಆಳ್ವಿಕೆಯಲ್ಲಿ ವಿದೇಶಾಂಗ ನೀತಿಯ ಮೇಲೆ ತುರ್ತು ಪರಿಸ್ಥಿತಿ ಉಂಟಾಗಿದ್ದು, ನೀತಿಯನ್ನು ಬದಿಗಿಟ್ಟಿದೆ. ಭಾರತವನ್ನು ಅನಿಯಂತ್ರಿತ ಸುಂಕಗಳು ಮತ್ತು ವೀಸಾ ಶುಲ್ಕಗಳಿಂದ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ದೇಶದ ಐತಿಹಾಸಿಕ ಅಲಿಪ್ತ ನೀತಿಯನ್ನು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ವಿದೇಶಗಳಿಂದ ಭಾರತೀಯರನ್ನು ಕೈಕೋಳ, ಸರಪಳಿಗಳ ಮೂಲಕ ಸಾರ್ವಜನಿಕ ಅವಮಾನ, ಹಿಂಸಾತ್ಮಾಕ ದಾಳಿಗಳಿಂದ ರಕ್ಷಿಸಲು, ಭಯೋತ್ಪಾದನೆ ವಿಷಯದಲ್ಲಿ ಯಾವುದೇ ನೆರೆಯ ದೇಶವನ್ನು ನಮ್ಮೊಂದಿಗೆ ತರಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕದ H1-B ವೀಸಾ ಶುಲ್ಕವನ್ನು ಹೆಚ್ಚಿಸಿರುವುದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅವರು, ಇದು ಹಲವಾರು ಭಾರತೀಯರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿದೇಶಗಳಲ್ಲಿ ನಿಮ್ಮ ವಿದೇಶಾಂಗ ನೀತಿ ವಿಫಲವಾಗಿದೆ. ನಿಮ್ಮ ಆರ್ಥಿಕ ನೀತಿಗಳು ವಿಫಲವಾಗಿವೆ. ನೀವು ಸಂಬಂಧಗಳನ್ನು ಸ್ಥಾಪಿಸುವಲ್ಲಿ ವಿಫಲರಾಗಿದ್ದೀರಿ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸಿಎಂಗೆ ಜನರ ಕೈಯಲ್ಲಿ ಪುಸ್ತಕ ಹಿಡಿಯುವುದು ಬೇಕಿಲ್ಲ. ಬಂದೂಕುಗಳನ್ನು ಹಿಡಿಯಲು ಬಯಸುತ್ತಾರೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳೆಗೆ ಇಳಿದ ದಿನವೇ ಭಾರತೀಯರಿಗೆ ವೀಸಾ ಪರಿಹಾರ ಸಿಗುತ್ತದೆ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net