

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ( Maharashtra Assembly Polls ) 288 ಕ್ಷೇತ್ರಗಳ ಜತೆಗೆ ಎರಡನೇ ಹಂತದಲ್ಲಿ ಜಾರ್ಖಂಡ್ ವಿಧಾನಸಭೆಯ 38 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಮತದಾನ ಬಿರುಸು ಪಡೆದುಕೊಂಡಿದ್ದು, ಮುಂಬೈನಲ್ಲಿ ಸೆಲೆಬ್ರಿಟಿಗಳು ಉತ್ಸಾಹದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ನಟರಾದ ಅಕ್ಷಯ್ ಕುಮಾರ್ ಮತ್ತು ರಾಜ್‌ಕುಮಾರ್ ರಾವ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬೆಳಗ್ಗೆಯೇ ಮತ ಚಲಾಯಿಸಿದ್ದಾರೆ.
ಮುಂಬೈನ ಮತಗಟ್ಟೆಯಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಮತದಾನ ಮಾಡಿದರು. ಬಳಿಕ ಮೂವರು ಮಾಧ್ಯಮದವರಿಗೆ ಶಾಯಿ ಹಚ್ಚಿದ ಬೆರಳನ್ನು ಪ್ರದರ್ಶಿಸಿದರು. ಬಳಿಕ ಮಾತನಾಡಿದ ಸಚಿನ್, ನಾನು ಸ್ವಲ್ಪ ಸಮಯದಿಂದ ಭಾರತೀಯ ಚುನಾವಣಾ ಆಯೋಗದ ಐಕಾನ್ ಆಗಿದ್ದೇನೆ. ಎಲ್ಲರು ಮತದಾನ ಮಾಡಿ ಎಂಬುದು ನಾನು ನೀಡುತ್ತಿರುವ ಸಂದೇಶವಾಗಿದೆ. ಇದು ನಮ್ಮ ಜವಾಬ್ದಾರಿಯೂ ಹೌದು. ಹೀಗಾಗಿ ಎಲ್ಲರೂ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದರು.
ನಟ ಅಕ್ಷಯ್ ಕುಮಾರ್ ಕೂಡ ಮತ ಚಲಾಯಿಸಿ, ತಮ್ಮ ಶಾಯಿಯ ಬೆರಳನ್ನು ತೋರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲರು ಮತದಾನ ಮಾಡುವಂತೆ ಕರೆ ನೀಡಿದರು. ಅಲ್ಲದೆ, ಮತಗಟ್ಟೆಯಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಹಿರಿಯ ನಾಗರಿಕರಿಗೆ ಮಾಡಿದ ವ್ಯವಸ್ಥೆಗಳು ಉತ್ತಮವಾಗಿವೆ. ಸ್ವಚ್ಛತೆಯನ್ನು ಕಾಪಾಡಲಾಗಿದೆ. ಎಲ್ಲರೂ ಹೊರಗೆ ಬಂದು ಮತದಾನ ಮಾಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದರು.
ನಟಿ ಟೀನಾ ದತ್ತಾ ಕೂಡ ಮತದಾನ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಫೋಟೋಗಳನ್ನು ಶೇರ್ ಮಾಡಿರುವ ದತ್ತಾ, ಮತದಾನದ ಸಂದೇಶವನ್ನು ಹಂಚಿಕೊಂಡಿದ್ದಾರೆ. ನಾನು ತುಂಬಾ ಬಿಜಿಯಾಗಿದ್ದೇನೆ ಎಂದು ಹೇಳುವುದನ್ನು ಬಿಟ್ಟು ಈ ಕೂಡಲೇ ನಿಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ, ನಿಮ್ಮ ಮತವನ್ನು ಚಲಾಯಿಸಿ, ಏಕೆಂದರೆ ಪ್ರತಿ ಮತವು ಮುಖ್ಯವಾಗುತ್ತದೆ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಮಂಡ್ಕರ್ ಕೂಡ ಮತದಾನ ಮಾಡಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಮುಂಬೈನ ಜ್ಞಾನ ಕೇಂದ್ರ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ನಟ ರಾಜ್‌ಕುಮಾರ್ ರಾವ್ ಮತದಾನ ಮಾಡಿದರು. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ಇದು ನಮ್ಮ ಹಕ್ಕು. ಆದ್ದರಿಂದ ನಾವು ಹೊರಗೆ ಹೆಜ್ಜೆ ಹಾಕುವುದು ಮತ್ತು ಮತ ಚಲಾಯಿಸುವುದು ಮುಖ್ಯ. ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಈಗ ನಿಮ್ಮ ಸರದಿ. ದಯವಿಟ್ಟು ಮತ ಚಲಾಯಿಸಿ ಎಂದು ರಾಜ್‌ಕುಮಾರ್ ರಾವ್ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದರು.
ಎಲ್ಲರು ಮತದಾನ ಮಾಡಿ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಇದು ದೇಶಕ್ಕೆ ಬಹಳ ಮುಖ್ಯ. ಇದನ್ನು ರಜೆ ಎಂದು ಆಚರಿಸಬೇಡಿ. ಹೋಗಿ ಮತದಾನ ಮಾಡಿ ಎಂದು ನಟ ಸೋನು ಸೂದ್ ಮತದಾನ ಮಾಡಿದ ನಂತರ ಹೇಳಿದರು.
ತಾರಾ ದಂಪತಿಯಾದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಲಾತೂರ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದೇಶಮುಖ್, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಚಲನಚಿತ್ರ ನಿರ್ದೇಶಕರಾದ ಕಬೀರ್ ಖಾನ್ ಮತ್ತು ಜೋಯಾ ಅಖ್ತರ್, ನಟರಾದ ಅಲಿ ಫಜಲ್ ಮತ್ತು ಜಾನ್ ಅಬ್ರಹಾಂ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ನಟ ಫರ್ಹಾನ್ ಅಖ್ತರ್ ಕೂಡ ಬೆಳಗ್ಗೆನೇ ಮತದಾನ ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. 288 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ಮತಪಟ್ಟಿಗೆಯಲ್ಲಿ ಭದ್ರವಾಗಲಿದೆ. ಚುನಾವಣೆಯಲ್ಲಿ 2,086 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4,136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. (ಏಜೆನ್ಸೀಸ್)