ಚಹಾ ಮಾರುವವನ ಮಗಳ ಆಗಸದೆತ್ತರದ ಸಾಧನೆ; ಮನೆಗೂ ತೆರಳದೆ ದೇಶಸೇವೆಗೆ ಸಜ್ಜು

Aanchal ganga
Published on

ಭೋಪಾಲ್​: ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಘಿದ್ದಾರೆ ಎಂಬ ಮಾತು, ಭಾರತದಲ್ಲಿ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಪ್ರತೀಕ. ಅಂತೆಯೇ ಚಹಾ ಮಾರುವವನ ಮಗಳೊಬ್ಬಳು ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ಆಯ್ಕೆಯಾಗಿದ್ದಾಳೆ.

ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ನಡೆದ ವಾಯುಸೇನಾ ಅಧೀಕಾರಿಗಳ ನಿರ್ಗಮನ ಪಥ ಸಂಚಲನದಲ್ಲಿ ರಾಷ್ಟ್ರಪತಿ ಫಲಕ ಹಾಗೂ ಪ್ರಶಸ್ತಿ ಪಡೆದ ಆಂಚಲ್​ ಗಂಗ್ವಾಲ್​ ಈ ಸಾಧಕಿ.

ಮಧ್ಯಪ್ರದೇಶ ಸರ್ಕಾರದಲ್ಲಿ ಲೇಬರ್​ ಇನ್​ಸ್ಪೆಕ್ಟರ್​, ಬಳಿಕ ಸಬ್​ ಇನ್​​ಸ್ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸಿರುವ ಆಂಚಲ್​ ಈಗಾಗಲೇ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.

ತನ್ನೂರು ನೀಮುಚ್​ನಲ್ಲಿದ್ದ ಸಿಆರ್​ಪಿಎಫ್​ ಕೇಂದ್ರದಿಂದಾಗಿ ಈಕೆಗೆ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದೆಂದರೆ ಅದೇನೋ ಭಾರಿ ಇಷ್ಟದ ಕೆಲಸವಾಗಿತ್ತು. ಅಪ್ಪ ಸುರೇಶ್​ ಟೀ ಮಾರುತ್ತಿದ್ದ ಅಂಗಡಿ ಆಗಾಗ ಬರುತ್ತಿದ್ದ ಆಂಚಲ್​ ಅಪ್ಪನಿಗೆ ನೆರವಾಗುತ್ತಿದ್ದುದಲ್ಲದೇ, ಅಲ್ಲಿಯೇ ಮರೆಯಲ್ಲಿ ತನ್ನ ಹೋಮ್​ ವರ್ಕ್ ಪೂರ್ಣಗೊಳಿಸಿಕೊಳ್ಳುತ್ತಿದ್ದಳು. ಶಾಲೆಯಲ್ಲಿದ್ದಾಗಲೇ ಸೇನೆ ಸೇರಬೇಕೆಂದು ಆಂಚಲ್​ ನಿರ್ಧಾರ ಕೈಗೊಂಡಿದ್ದಳು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿ ಯಶಸ್ಸು ಕಂಡಿದ್ದಾಳೆ.

ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಬೆಳೆಸಲು ತಂದೆ ಕಷ್ಟಪಟ್ಟಿದ್ದನ್ನು ಆಂಚಲ್​ ನೆನೆಯುತ್ತಾಳೆ. ಅವರಿಗೆ ಅಗತ್ಯವಾದ ಎಲ್ಲವನ್ನೂ ಪೂರೈಸಲು ಶ್ರಮಪಡುತ್ತಿದ್ದರು ಎನ್ನುತ್ತಾಳೆ.

ಕಂಪ್ಯೂಟರ್​ ಸೈನ್ಸ್​ನಲ್ಲಿ ಪದವಿ ಪೂರೈಸಿದ ಬಳಿಕ ಸೇನೆಯನ್ನು ಸೇರಲು ಸಿದ್ಧತೆ ನಡೆಸಿ ಯಶಸ್ಸು ಕಂಡಿದ್ದಾಳೆ. ಈ ಸಂಬ್ರಮವನ್ನು ಮನೆಯವರೊಂದಿಗೆ ಆಚರಿಸುವ ಭಾಗ್ಯವೂ ಆಕೆಗಿಲ್ಲವಾಗಿದೆ. ಏಕೆಂದರೆ, ತರಬೇತಿ ಪೂರ್ಣಗೊಳಿಸಿದವರನ್ನು ಇಲ್ಲಿಂದ ನೇರವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ದೇಶ ಸೇವೆಗೆ ಎಂದಿಗೂ ಸಿದ್ಧ ಎನ್ನುವುದು ಆಕೆಯ ದಿಟ್ಟ ನುಡಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net