

ಭೋಪಾಲ್: ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಹೋರಾಟಗಳನ್ನು ಮಾಡುತ್ತಲೇ ಇರುತ್ತೇವೆ. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಕ್ಷಣ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸುತ್ತೇವೆ. ಆದರೆ ಪರಿಸ್ಥಿತಿಯೇನಾದರೂ ಬದಲಾಗಿದೆಯೇ? ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮೆಯಾಗಿದೆಯೇ ಎಂದು ಕೇಳಿದರೆ ನಮ್ಮಲ್ಲಿ ಉತ್ತರವಿಲ್ಲ. ಮಧ್ಯ ಪ್ರದೇಶದ ಪೊಲೀಸರು ಅನುಸರಿಸಿರುವ ಮಾರ್ಗ ನೋಡಿದರೆ ಈ ರೀತಿಯ ಪ್ರಕರಣಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂದೆನಿಸುತ್ತದೆ.
ಜೈಲಿನ ನಾಲ್ಕು ಗೋಡೆಯೊಳಗೆ ಅಪರಾಧಿಗಳಿಗೆ ಶಿಕ್ಷೆ ನೀಡಿದರೆ ಅವರು ಬುದ್ಧಿ ಕಲಿತುಬಿಡುವುದಿಲ್ಲ. ಬದಲಾಗಿ ಸಮಾಜದೆದುರು ಶಿಕ್ಷೆಯಾಗಬೇಕು. ಸಮಾಜದ ಎದುರು ಮಾನ ಹೋದರೆ ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಅನೇಕರು ವಾದಿಸುತ್ತಲೇ ಬಂದಿದ್ದಾರೆ. ಇದೀಗ ಮಧ್ಯ ಪ್ರದೇಶ ಪೊಲೀಸರೂ ಕೂಡ ಅದೇ ಮಾರ್ಗ ಹಿಡಿದಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಎಲ್ಲ ಪೊಲೀಸರಂತೆ ಆರೋಪಿಗಳನ್ನು ಪೊಲೀಸ್ ಗಾಡಿಯಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯದೆ, ನಡೆಸಿಕೊಂಡೇ ಕರೆದುಕೊಂಡು ಹೋಗಲಾಗಿದೆ. ಕೋರ್ಟ್ಗೆ ಹೋಗುವ ದಾರಿಯಲ್ಲಿ ಅವರಿಗೆ ಬಸ್ಕಿ ಹೊಡೆಯುತ್ತ ನಡೆಯುವ ಶಿಕ್ಷೆಯನ್ನು ನೀಡಲಾಗಿದೆ. ಬಸ್ಕಿ ನಿಲ್ಲಿಸಿದರೆ ಅಲ್ಲಿಯೇ ಅವರಿಗೆ ಏಟನ್ನೂ ನೀಡಲಾಗಿದೆ. ಈ ರೀತಿಯ ವಿಶೇಷ ಶಿಕ್ಷೆಯನ್ನು ಹತ್ತಾರು ಜನರು ವಿಡಿಯೋ ಮಾಡಿಕೊಂಡಿದ್ದು, ಅಪರಾಧಿಗಳತ್ತ ಕೈ ತೋರಿಸಿ ನಕ್ಕಿದ್ದಾರೆ. ಇದೀಗ ಆ ಅಪರಾಧಿಗಳ ಮಾನ ಸಂಪೂರ್ಣವಾಗಿ ಹರಾಜಾಗಿದೆ. (ಏಜೆನ್ಸೀಸ್)