ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

Madhya Pradesh man wins wife back with half kilo of tomatoes
Published on

ಬೋಫಾಲ್​​: ಪರ್ಮಿಶನ್ ಇಲ್ದೆ ಟೊಮ್ಯಾಟೋವನ್ನು ಅಡುಗೆಗೆ ಹಾಕಿದ್ದಕ್ಕೆ ಮಹಿಳೆ ತನ್ನ ಗಂಡನ ಜತೆಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಇದೀಗ ಒಂದು ದಿನದ ನಂತರ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ, ಪತಿ ಮತ್ತೆ ಅರ್ಧ ಕೆಜಿ ಟೊಮ್ಯಾಟೋ ಪತ್ನಿಗೆ ಕೊಟ್ಟು ಮತ್ತೆ ಒಂದಾಗಿದ್ದಾರೆ.

ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ತನ್ನ ಹೆಂಡತಿಯನ್ನು ಕೇಳದೆ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ. ಟೊಮ್ಯಾಟೋ ಬಳಸಿದ ವಿಚಾರವಾಗಿ ಕೋಪಗೊಂಡ ಮಹಿಳೆ ತನ್ನ ಚಿಕ್ಕ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು.

ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿಯನ್ನು ಹುಡುಕಿ ಹುಡುಕಿ ಸಾಕಾದ ಪತಿ ಪೊಲೀಸರ ಮೊರೆ ಹೋಗಿದ್ದು, ಮೂರು ದಿನದಿಂದ ಪತ್ನಿ ಮಗಳ ಜತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಆದಷ್ಟು ಬೇಗ ಅವರನ್ನು ಹುಡುಕಿ ಮನೆಗೆ ಕಳುಹಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರು. ಆದರೆ ಇದೀಗ ದಂಪತಿ ಮತ್ತೆ ಒಂದಾಗಿದ್ದಾರೆ.

ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ, ಸಂಜೀವ್ ವರ್ಮಾ ತಮ್ಮ ಪತ್ನಿ ಆರತಿಗೆ ಅರ್ಧ ಕಿಲೋ ಟೊಮ್ಯಾಟೋವನ್ನು ಧನಪುರಿ ಪೊಲೀಸ್ ಠಾಣೆಯಲ್ಲಿ ಉಡುಗೊರೆಯಾಗಿ ನೀಡಿದರು. ಮತ್ತು ಪತ್ನಿಯ ಅನುಮತಿ ಇಲ್ಲದೆ ಅವುಗಳನ್ನು ಅಡುಗೆ ಬಳಸಲ್ಲ ಎಂದೂ ಪ್ರತಿಜ್ಞೆ ಮಾಡಿದ್ದಾರೆ. ಧನ್‌ಪುರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಂಪತಿಗೆ ಒಟ್ಟಿಗೆ ಇರುವಂತೆ ಸಲಹೆ ನೀಡಿದರು ಮತ್ತು ಪರಸ್ಪರರ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net