ಕರ್ನಾಟಕದ ನೂತನ ಪೊಲೀಸ್‌ ಮಹಾನಿರ್ದೇಶಕರಾಗಿ 'ಎಂ.ಎ ಸಲೀಂ' ನೇಮಕ| DG, IGP

salim
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನ ನೇಮಕ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ.

1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಲೀಂ, ಡಿಜಿಪಿ ಅಲೋಕ್ ಮೋಹನ್ ನಿವೃತ್ತರಾದ ಬಳಿಕ ಕಳೆದ ಮೇ 21 ರಿಂದ ಪ್ರಭಾರ ಡಿಜಿ–ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿರುವ ಇವರು 2026ರ ಜೂನ್‌ನಲ್ಲಿ ನಿವೃತ್ತರಾಗಲಿದ್ದು, ಒಂದು ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ.

ತುಮಕೂರು ಜಿಲ್ಲೆಯವರಾದ ಡಾ.ಸಲೀಂ ಅವರು ಕುಶಾಲನಗರ ಎಎಸ್​ಪಿ, ಉಡುಪಿ, ಹಾಸನ ಎಸ್​ಪಿ, ಮೈಸೂರು ನಗರ ಪೊಲೀಸ್‌ ಆಯುಕ್ತ, ದಾವಣಗೆರೆ ಐಜಿಪಿ, ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಸಂಚಾರ ವಿಷಯದಲ್ಲಿಯೇ ಪಿಎಚ್‌ಡಿಯನ್ನೂ ಸಹ ಮಾಡಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net