

Temples Theft: ಸುಮಾರು 10 ವರ್ಷಗಳಿಂದ ಛತ್ತೀಸ್ಗಢದ ದುರ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ದೇವಾಲಯಗಳ ಹುಂಡಿ ಪೆಟ್ಟಿಗೆ ಕಳ್ಳತನ ಮಾಡ್ತಿದ್ದ 45 ವರ್ಷದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕಳ್ಳ ಹೆಚ್ಐವಿ ಪೀಡಿತ ಎನ್ನಲಾಗಿದ್ದು, ಇದು ದೇವರ ವಿರುದ್ಧದ ಸೇಡು ತೀರಿಸಿಕೊಳ್ಳುವ ಕ್ರಿಯೆ ಎಂದು ತನ್ನ ಕಳ್ಳತನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
ಆರೋಪಿ 2012ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುವಾಗ ಹೆಚ್ಐವಿ ಸೋಂಕಿಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಇದರಿಂದ ಧರ್ಮದ ಮೇಲೆ ನಂಬಿಕೆ ಕಳೆದುಕೊಂಡು ಇದು ನನಗೆ ದೇವರು ನೀಡಿದ ಕೃತ್ಯ, ಅದಕ್ಕಾಗಿ ನನ್ನ ಸಾಮರ್ಥ್ಯ ತೋರಿಸಲು ದೇವಾಲಯಗಳನ್ನು ಗುರಿಯಾಗಿಸಿ ಕಳ್ಳತನ ಮಾಡ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಗ್ ಮತ್ತು ಅದರ ಹೊರವಲಯದಲ್ಲಿರುವ ದೇವಾಲಯಗಳಲ್ಲಿ ಕನಿಷ್ಠ 10 ಕಳ್ಳತನಗಳನ್ನು ಈ ವ್ಯಕ್ತಿ ಭಾಗಿಯಾಗಿದ್ದಾನೆ. ಆದರೆ ಇನ್ನೂ ಹೆಚ್ಚಿನ ಕಳ್ಳತನಗಳಲ್ಲಿ ಅವನು ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಅವನ ನಡವಳಿಕೆ ಸ್ಥಿರವಾಗಿದ್ದು, ದೇಣಿಗೆ ಪೆಟ್ಟಿಗೆಗಳಿಂದ ಹಣವನ್ನು ಮಾತ್ರ ಕದಿಯುತ್ತಿದ್ದು, ಆಭರಣಗಳನ್ನು ಮುಟ್ಟುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಗುರುತು ಮರೆಮಾಚಲು ಅವನು ಪ್ರತಿ ಕಳ್ಳತನದ ಮೊದಲು ಮತ್ತು ನಂತರ ಬಟ್ಟೆ ಬದಲಾಯಿಸುತ್ತಿದ್ದನು. ಯಾವಾಗಲೂ ತನ್ನ ಜುಪಿಟರ್ ಸ್ಕೂಟರ್ ಅನ್ನು ಅಪರಾಧ ಸ್ಥಳದಿಂದ ದೂರದಲ್ಲಿ ನಿಲ್ಲಿಸುತ್ತಿದ್ದನು. ಆಗಸ್ಟ್ 23 ಮತ್ತು 24 ರ ಮಧ್ಯರಾತ್ರಿ ಆರೋಪಿ ದುರ್ಗ್ ಹೊರವಲಯದಲ್ಲಿರುವ ಜೈನ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಿದ್ದ. ವಿಚಾರಣೆಗಾಗಿ ಆತನನ್ನು ಕರೆದೊಯ್ದ ಮರುದಿನ ಆತನನ್ನು ಬಂಧಿಸಲಾಯಿತು. 1,282 ರೂ. ಮೌಲ್ಯದ ಕದ್ದ ನಾಣ್ಯಗಳು ಮತ್ತು ಆತನ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಸದ್ಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. (ಏಜೆನ್ಸೀಸ್)