

Jagadeep Dhanakar: ಮಳೆಗಾಲದ ಅಧಿವೇಶನದ ಆರಂಭದ ದಿನ ಜುಲೈ 21ರಂದು ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ಅನಾರೋಗ್ಯದ ಕಾರಣ ಕೊಟ್ಟು ರಾಜೀನಾಮೆ ನೀಡಿದ ಜಗದೀಪ್ ಧನಕರ್ ಇತ್ತೀಚೆಗೆ ಮಾಜಿ ಶಾಸಕರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಶನಿವಾರ(ಆಗಸ್ಟ್ 30) ವರದಿಯಾಗಿದೆ.
ಮಾಜಿ ಶಾಸಕರ ಪಿಂಚಣಿಗಾಗಿ ರಾಜಸ್ಥಾನ ವಿಧಾನಸಭೆಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ರಾಜಸ್ಥಾನ ವಿಧಾನಸಭಾ ಸಚಿವಾಲಯ ದೃಢಪಡಿಸಿದೆ. ಅದಕ್ಕೆ ಅನುಮೋದಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದೆ. ಧನಕರ್ 1993 ರಿಂದ 1998 ರವರೆಗೆ ರಾಜಸ್ಥಾನದ ಕಿಶನ್‌ಗಢ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು.
ರಾಜಸ್ಥಾನ ಸರ್ಕಾರದ ಪಿಂಚಣಿ ಯೋಜನೆಯ ಪ್ರಕಾರ, ಮಾಜಿ ಶಾಸಕರಿಗೆ ಅವರ ಅಧಿಕಾರಾವಧಿಯ ಆಧಾರದ ಮೇಲೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಧನಕರ್ ಅವರಿಗೆ ಮಾಸಿಕ 42,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಅವರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳು, ಪ್ರಯಾಣ ಭತ್ಯೆಗಳು ಮತ್ತು ಸಭೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಲಾಗುತ್ತದೆ. ಇತರ ಆಡಳಿತಾತ್ಮಕ ಸೌಲಭ್ಯಗಳು ಸಹ ಇರುತ್ತವೆ.
ಧನಕರ್ ಅವರ ರಾಜಕೀಯ ಪ್ರಯಣ ಸುದೀರ್ಘವಾಗಿದೆ. 1989ರಲ್ಲಿ ಜನತಾ ದಳದ ಟಿಕೆಟ್‌ನಲ್ಲಿ ಝಂಝುನು ಲೋಕಸಭೆ ಕ್ಷೇತ್ರದಿಂದ ಗೆದ್ದು ಸಂಸದರಾದರು. ಆಗಿನ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 1993ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಕಿಶನ್‌ಗಢ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2003ರಲ್ಲಿ ಬಿಜೆಪಿ ಸೇರಿದರು. 2019 ರಿಂದ 2021ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. 2022 ರಿಂದ 2025 ರವರೆಗೆ ಉಪರಾಷ್ಟ್ರಪತಿಯಾಗಿದ್ದರು. (ಏಜೆನ್ಸೀಸ್)