

PM Modi China Visit: ಪ್ರಧಾನಿ ಮೋದಿ ತಮ್ಮ ಎರಡು ದ್ವೀಪ ರಾಷ್ಟ್ರಗಳ ಪ್ರವಾಸ ಮುಗಿಸಿ ಇಂದು (ಆಗಸ್ಟ್ 30) ಜಪಾನ್ನಿಂದ ಬರೊಬ್ಬರಿ ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡಿದ್ದಾರೆ. ನಾಳೆ ಮತ್ತು ನಾಡಿದ್ದು 2 ಚೀನಾದಲ್ಲಿದ್ದು, ಶಾಂಘೈ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕ ನೀತಿಯಿಂದಾಗಿಅಮೆರಿಕಾ-ಭಾರತದ ನಡುವೆ ಸಂಬಂಧ ಹಳಸಿದ್ದು, ಈ ನಡುವೆ ಭಾರತ-ಚೀನಾ ಭೇಟಿ ಮಹತ್ವ ಪಡೆದುಕೊಂಡಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಶೃಂಗಸಭೆಯ ಕೊನೆಯಲ್ಲಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇತರೆ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಮಾತುಕತೆಯ ಸಮಯದಲ್ಲಿ ಮೋದಿ ಮತ್ತು ಜಿನ್ಪಿಂಗ್ ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಾಮರ್ಶಿಸುವ ನಿರೀಕ್ಷೆಯಿದೆ. ಪೂರ್ವ ಲಡಾಖ್ ಗಡಿ ವಿವಾದದ ನಂತರ ಹಳಸಿದ್ದ ಸಂಬಂಧಗಳನ್ನು ಸುಧಾರಿಸುವ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
ಟಿಯಾಂಜಿನ್ಗೆ ಭೇಟಿ ನೀಡುವ ಮುನ್ನ ಜಪಾನ್ನ ದಿ ಯೋಮಿಯುರಿ ಶಿಂಬುನ್ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಭಾರತ ಮತ್ತು ಚೀನಾ ನಡುವಿನ ಸ್ಥಿರ, ಊಹಿಸಬಹುದಾದ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ವಿಶ್ವದ ಆರ್ಥಿಕತೆಯ ಪ್ರಸ್ತುತ ಏರಿಳಿತಗಳನ್ನು ಗಮನಿಸಿದರೆ, ಎರಡು ಪ್ರಮುಖ ಆರ್ಥಿಕತೆಗಳಾದ ಭಾರತ ಮತ್ತು ಚೀನಾ ವಿಶ್ವ ಆರ್ಥಿಕ ಕ್ರಮಕ್ಕೆ ಸ್ಥಿರತೆಯನ್ನು ತರಲು ಒಟ್ಟಾಗಿ ಕೆಲಸ ಮಾಡುವುದು ಸಹ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ ಹದಿನೈದು ದಿನಗಳ ಒಳಗೆ ಮೋದಿಯವರು ಚೀನಾ ಪ್ರವಾಸ ಕೈಗೊಂಡಿದ್ದಾರೆ . ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ವಾಂಗ್ ನಡೆಸಿದ ವ್ಯಾಪಕ ಮಾತುಕತೆಗಳ ನಂತರ ಎರಡು ದೇಶಗಳ ಸಂಬಂಧ ಸುಧಾರಣೆಗೆ ಮುಂದಾಗಿವೆ.
ಪ್ರಧಾನಿ ಕೊನೆಯ ಬಾರಿಗೆ ಜೂನ್ 2018 ರಲ್ಲಿ SCO ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾದ ಅಧ್ಯಕ್ಷ ಕ್ಸಿ ಕ್ಸಿ ಅವರು ಅಕ್ಟೋಬರ್ 2019 ರಲ್ಲಿ ಎರಡನೇ "ಅನೌಪಚಾರಿಕ ಶೃಂಗಸಭೆ" ಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. (ಏಜೆನ್ಸೀಸ್)