

Murder Case: ತನ್ನ ಕಾಮದಾಟದಕ್ಕೆ ಅಡ್ಡಿಯಾಗಿದ್ದ ಪತಿಗೆ ಗುಂಡಿ ತೋಡಿದ ಕಿರಾತಕಿ ಮಹಿಳೆಯೊಬ್ಬಳು, ಇದು ಕೊಲೆ ಎಂಬ ಶಂಕೆ ಮೂಡದಂತೆ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ಈ ಕೊಲೆ ಪ್ರಕರಣ ಸರೂರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತಂತೆ ಇನ್ಸ್‌ಪೆಕ್ಟರ್ ಸೈದಿ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಗರ್ಕರ್ನೂಲ್ ಜಿಲ್ಲೆಯ ಉರುಕೊಂಡ ಮಂಡಲದ ಮದ್ರಾಮ್ ಗ್ರಾಮದ ಜೆಲ್ಲೆಲಾ ಶೇಖರ್ (40) ಮೃತ ದುರ್ದೈವಿ. ತನ್ನ ಪತ್ನಿ (ಆರೋಪಿ) ಚಿಟ್ಟಿಯೊಂದಿಗೆ ದಿಲ್ಸುಖ್‌ನಗರದ ಕೋದಂಡರಾಮನಗರದಲ್ಲಿ ಶೇಖರ್ ವಾಸಿಸುತ್ತಿದ್ದ. 16 ವರ್ಷಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟ ಈ ದಂಪತಿಗೆ, ಒಬ್ಬ ಮಗ ಮತ್ತು ಮಗಳಿದ್ದಾರೆ. ಮೃತ ಶೇಖರ್ ವೃತ್ತಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
"ಶುಕ್ರವಾರ (ಆ.29) ಮಧ್ಯಾಹ್ನ, ಪೊಲೀಸರ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದ ಮಹಿಳೆ, ನನ್ನ ಗಂಡ ನಿದ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದಳು. ತಕ್ಷಣವೇ ನಾವು ಸ್ಥಳಕ್ಕೆ ಹೋದೆವು. ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿದೆವು. ತುಟಿಗಳ ಮೇಲೆ ಗಾಯಗಳಿರುವುದು ಕಂಡು ನಮಗೆ ಅನುಮಾನ ಮೂಡಿತು. ಈ ವೇಳೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಮಾಡಿದ ಕೊಲೆಯನ್ನು ಆರೋಪಿ ಒಪ್ಪಿಕೊಂಡಳು" ಎಂದು ಹೇಳಿದರು.
"ತನ್ನ ಪ್ರಿಯಕರನಿಗಾಗಿ ಆಕೆ ತನ್ನ ಗಂಡನನ್ನು ಕೊಂದಿದ್ದಾಳೆ. ಸ್ಥಳೀಯ ನಿವಾಸಿ ಹರೀಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಈ ವಿಷಯ ಪತಿ ಕಿವಿಗೆ ಬೀಳುತ್ತಿದ್ದಂತೆ ಜಗಳವಾಡಿದ್ದಳು. ಗಂಡ-ಹೆಂಡತಿ ಮಧ್ಯೆ ಇದೇ ವಿಚಾರಕ್ಕೆ ಪದೇ ಪದೇ ಜಟಾಪಟಿಯೂ ನಡೆದಿದೆ. ಈ ಸಂದರ್ಭದಲ್ಲಿ, ತನ್ನ ಪತಿಯನ್ನು ಕೊಲ್ಲುವ ನಿರ್ಧಾರಕ್ಕೆ ಮುಂದಾದ ಆರೋಪಿ, ಗುರುವಾರ ತಡರಾತ್ರಿ, ಶೇಖರ್ ನಿದ್ರೆಗೆ ಜಾರಿದ ವೇಳೆ ಹರೀಶ್ ಜತೆಗೂಡಿ ಕುತ್ತಿಗೆ ಹಿಸುಕಿ ಕೊಂದಿದ್ದಾಳೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).