ಸುಂಕ ಸಮರ ಸಾಧಿಸುವ ಟ್ರಂಪ್​ಗೆ​ ಆರೋಗ್ಯ ಸರಿಯಿಲ್ಲ! ಟ್ರೆಂಡ್​ ಆಗ್ತಿರುವ ವಿಷಯವೇನು? ಹೀಗಿದೆ ವರದಿ | Trump Health

ವಿಜಯವಾಣಿ (29)
Published on

Trump Health: ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಹಾಗೂ ದಿಢೀರ್​ ನಿರ್ಧಾರಗಳ ಮೂಲಕ ಸದಾ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಕಾಣೆಯಾಗಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದೆ. ಟ್ರಂಪ್ ಎರಡು ದಿನಗಳಿಂದ ಸಾರ್ವಜನಿಕರಿಗೆ ಕಾಣಿಸುತ್ತಿಲ್ಲ ಎಂಬ ವದಂತಿಗಳು ಸೋಷಿಯಲ್​ ಮೀಡಿಯಾವನ್ನು ಸುತ್ತುವರೆದಿವೆ.

ಟ್ರಂಪ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸುದ್ದಿಗಳು ಹೊರಬಿದ್ದಿದ್ದು, ನೆಟ್ಟಿಗರಲ್ಲಿ ಕಳವಳ ಮೂಡಿಸಿದೆ. ಇದಕ್ಕೆ ಕಾರಣ, ಟ್ರಂಪ್​ ಕೈಯಲ್ಲಿ ದೊಡ್ಡ ಗಾಯದ ಗುರುತು ಕಾಣಿಸುವ ಫೋಟೋ. ಪ್ರತ್ಯೇಕವಾಗಿ ಈ ಫೋಟೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ ಹಾಗೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರೊಟ್ಟಿಗೆ ಟ್ರಂಪ್​ರ ಕಾಲುಗಳು ಸಹ ಊದಿಕೊಂಡಿವೆ ಎಂದು ಹೇಳಲಾಗಿದೆ. ಇದರ ಮಧ್ಯೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ನಾನು ಸಿದ್ಧ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆ ನೀಡಿರುವುದು ಸದ್ಯ ಅಮೆರಿಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.

'ಟ್ರಂಪ್​ ಮೃತ' ಟ್ರೆಂಡ್​!

ಕಳೆದ ಒಂದೆರೆಡು ದಿನಗಳಿಂದ ಎಕ್ಸ್​ನಲ್ಲಿ​ (ಹಿಂದಿನ ಟ್ವಿಟರ್​) ಸಖತ್ ಟ್ರೆಂಡಿಂಗ್​ನಲ್ಲಿರುವ ಟ್ರಂಪ್​, ತಮ್ಮ ರಾಜಕೀಯ ವಿಷಯದಿಂದಲೋ ಅಥವಾ ಸುಂಕ ಸಮರದಿಂದಲೋ ಚರ್ಚೆಗೆ ಬಂದಿಲ್ಲ. ಬದಲಿಗೆ ಸಾವಿನ ಸುದ್ದಿ ಮೂಲಕ ಭಾರೀ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಇದು ಉಪಾಧ್ಯಕ್ದ ಜೆಡಿ ವ್ಯಾನ್ಸ್ ನೀಡಿದ ಹೇಳಿಕೆಗೋ ಅಥವಾ ಟ್ರಂಪ್ ಆರೋಗ್ಯ ಸಮಸ್ಯೆಯಿಂದಲೋ ಎಂಬುದು ಅಸ್ಪಷ್ಟ.

'ಟ್ರೂತ್​'ನಲ್ಲಿ ಟ್ರಂಪ್​ ಸಕ್ರಿಯ

ಆಗಸ್ಟ್ 30 ಮತ್ತು 31ರಂದು ಟ್ರಂಪ್‌ಗೆ ಯಾವುದೇ ವೇಳಾಪಟ್ಟಿ ನಿಗದಿಯಾಗಿಲ್ಲ. ಇದು ವದಂತಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಟ್ರಂಪ್ ಆರೋಗ್ಯ ವದಂತಿಗಳು ಹೆಚ್ಚಿನ ಕಳವಳವನ್ನು ಉಂಟುಮಾಡುವುದರ ಜತೆಗೆ ಜೆಡಿ ವ್ಯಾನ್ಸ್​ ನುಡಿದಂತೆ ನಡೆಯಲಿದ್ಯಾ? ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ಡೊನಾಲ್ಡ್ ಟ್ರಂಪ್​, ಜನರ ಕಣ್ಣಿಗೆ ಬೀಳದಿದ್ದರೂ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದರೂ, ಅವರ ಸೋಷಿಯಲ್ ಮೀಡಿಯಾ ಖಾತೆಗಳು ಸಕ್ರಿಯವಾಗಿವೆ. ತಮ್ಮದೇ ಆದ ಟ್ರೂತ್​ ಸೋಷಿಯಲ್​ನಲ್ಲಿ ಟ್ರಂಪ್​ ತಮ್ಮ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನ್ಯಾಯಾಲಯದ ತೀರ್ಪಿಗೆ ಟ್ರಂಪ್ ಪ್ರತಿಕ್ರಿಯೆ

ಟ್ರಂಪ್ ವಿಧಿಸಿರುವ ಹೆಚ್ಚಿನ ಸುಂಕಗಳು ಕಾನೂನುಬಾಹಿರ ಮತ್ತು ಅಮಾನ್ಯವೆಂದು ಯುಎಸ್ ಸ್ಥಳೀಯ ನ್ಯಾಯಾಲಯವು ತೀರ್ಪು ಕೊಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್​. ನ್ಯಾಯಾಲಯವು ತಪ್ಪು ನಿರ್ಧಾರ ತೆಗೆದುಕೊಂಡಿದೆ ಮತ್ತು ಸುಂಕಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಅವರು ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.

ಕೈಯಲ್ಲಿ ಗಾಯ ಏನು?

ಟ್ರಂಪ್ ಅವರ ಕೈಯಲ್ಲಿ ಗಾಯದಂತೆ ಇರುವ ಫೋಟೋಗಳು ವೈರಲ್ ಆಗಿದ್ದು, ಇದು ಏನು? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಟ್ರಂಪ್​ರ ವೈದ್ಯರು ಉತ್ತರಿಸಿದ್ದು, ಅತಿಯಾದ ಹ್ಯಾಂಡ್‌ಶೇಕ್‌ ಮತ್ತು ಆಸ್ಪಿರಿನ್‌ನ ಅತಿಯಾದ ಬಳಕೆಯಿಂದಾಗಿ ಅಂಗಾಂಶ ಹಾನಿಗೊಳಗಾಗಿದೆ. ಟ್ರಂಪ್ ಗಟ್ಟಿಯಾಗಿದ್ದಾರೆ ಮತ್ತು ಅವರ ಆರೋಗ್ಯಕ್ಕೆ ಯಾವುದೇ ರೀತಿ ತೊಂದರೆಯಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net